
ಮಡಿಕೇರಿ NEWS DESK ಆ.13 : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ರಾಜ್ಯ ಸರಕಾರ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ, ಬಗರ್ ಹುಕುಂ ಸಮಿತಿಯ ಸದಸ್ಯ ಹಾಗೂ ಕೊಡಗು ಜಿಲ್ಲಾ ಬುಡಕಟ್ಟು ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಜೆ.ಎಲ್.ಜನಾರ್ಧನ್ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಚಿವ ಸ್ಥಾನವನ್ನು ಹೊಂದಲು ಸಂಪೂರ್ಣ ಅರ್ಹತೆಯನ್ನು ಹೊಂದಿದ್ದ ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ಸಿಗದೆ ಇರುವುದರಿಂದ ಕ್ಷೇತ್ರದ ಜನತೆಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಶೆಯಾಗಿದೆ. ಆದ್ದರಿಂದ ಉನ್ನತ ಮಟ್ಟದ ನಿಗಮ ಮಂಡಳಿಯಲ್ಲಾದರೂ ಅಧ್ಯಕ್ಷ ಸ್ಥಾನವನ್ನು ನೀಡಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ವಿದ್ಯಾವಂತರಾಗಿರುವ ಯುವ ಶಾಸಕ ಡಾ.ಮಂತರ್ ಗೌಡ ಅವರು ಆಡಳಿತದ ಪ್ರತಿ ಕ್ಷೇತ್ರದ ಅನುಭವವನ್ನು ಹೊಂದಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕವೇ ಜನಪ್ರಿಯತೆಯನ್ನು ಗಳಿಸಿದ್ದಾರೆ. ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ಅರ್ಹತೆ ಇದ್ದರೂ ಸಚಿವ ಸ್ಥಾನ ದೊರೆಯಲಿಲ್ಲ. ಮುಂದಿನ ದಿನಗಳಲ್ಲಿ ಇವರ ಕಾರ್ಯವೈಖರಿಯನ್ನು ಗುರುತಿಸಿ ನಿಗಮ ಮಂಡಳಿಯಲ್ಲಾದರೂ ಸ್ಥಾನ ಕಲ್ಪಿಸುವ ಮೂಲಕ ಅರ್ಹತೆಗೆ ತಕ್ಕ ಗೌರವ ನೀಡಬೇಕೆಂದು ಸರಕಾರದ ಬಳಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ನಿಗಮ ಮಂಡಳಿಯಲ್ಲಿ ಉನ್ನತ ಸ್ಥಾನ ಲಭಿಸಿದರೆ ಜಿಲ್ಲೆ ಮಾತ್ರವಲ್ಲದೆ ರಾಜ್ಯಕ್ಕೂ ಉತ್ತಮ ಸೇವೆ ಮಾಡಲು ಅವಕಾಶ ಲಭಿಸುತ್ತದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ವೇಗವನ್ನು ಪಡೆದು ಜನಮೆಚ್ಚುಗೆ ಹೆಚ್ಚಾಗಲಿದೆ. ಆ ಮೂಲಕ ಪಕ್ಷದ ಬೆಳವಣಿಗೆಯೂ ಸಾಧ್ಯವಾಗಲಿದೆ ಎಂದು ಜೆ.ಎಲ್.ಜನಾರ್ಧನ್ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲೆಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜನಸ್ನೇಹಿ ಶಾಸಕ ಡಾ.ಮಂತರ್ ಗೌಡ ಅವರಿಗೆ ಉನ್ನತ ಸ್ಥಾನ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.









