ಸುಂಟಿಕೊಪ್ಪ ಜೂ.7 : ಜಿಲ್ಲೆಯಲ್ಲಿ ಈ ಹಿಂದೆ ಭೂಕುಸಿತ ಉಂಟಾದ ಸಮಯದಿಂದ ಇಲ್ಲಿಯವರೆಗೂ ಬೆಂಗಳೂರಿನ ಜಾಗೃತಿ ಸಂಸ್ಥೆ ಹಾಗೂ ಸಿಸ್ಕೋ ಕಂಪನಿಯು ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳ ಜನತೆಯೊಂದಿಗೆ ಒಡನಾಟವನ್ನಿರಿಸಿಕೊಂಡಿದ್ದು ಅವರಿಗೆ ಅಗತ್ಯ ನೆರವು ಸಹಕಾರಗಳನ್ನು ನೀಡುತ್ತಾ ಬಂದಿದೆ. ಇತ್ತೀಚೆಗೆ ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಮಾದಾಪುರ ಗ್ರಾಮಗಳ ಜನರ ಪರಿಸ್ಥಿತಿ ಅವಲೋಕಿಸಿ ಬೆಂಗಳೂರಿನ ಜಾಗೃತಿ ಸಂಸ್ಥೆ ಮತ್ತು ಸಿಸ್ಕೋ ಕಂಪನಿಯ 84 ಮಂದಿ ಸ್ವಯಂಸೇವಕರ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಡಿತರ ಕಿಟ್, ಹೆಣ್ಣು ಮಕ್ಕಳಿಗೆ ನೈರ್ಮಲ್ಯ ಕಿಟ್, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಾಗ್ರಿಗಳನ್ನು ವಿತರಿಸಿದರು. ಇದೇ ಸಂದರ್ಭ ಮಾದಾಪುರ ಸರ್ಕಾರಿ ಶಾಲೆಯ ಗೋಡೆಯಲ್ಲಿ ಮಂಡಲ ಚಿತ್ರಗಳನ್ನು ಬಿಡಿಸಲಾಯಿತು. ಇದರಿಂದ ಹಲವು ರೀತಿಯಲ್ಲಿ ದಿನನಿತ್ಯ ಮಕ್ಕಳಿಗೆ ಶಾಲೆಯಲ್ಲಿ ಸಹಾಯವಾಗಲಿದೆ. ಈ ಸಂದರ್ಭ ಸಿಸ್ಕೋ ಕಂಪನಿಯ ಬಾನಂಡ ಸಂಪತ್, ಜಾಗೃತಿ ಸಂಸ್ಥೆಯ ಕಣ್ಣನ್, ಶರಣ್, ನೋಯೇಲ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಲೇಖಕ: admin
ಸುಂಟಿಕೊಪ್ಪ ಜೂ.7 : ಕೊಡಗು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆ ಕುಶಾಲನಗರ ತಾಲ್ಲೂಕು ತಹಸೀಲ್ದಾರ್‌ರ ಮಾರ್ಗದರ್ಶನದಡಿ ಸುಂಟಿಕೊಪ್ಪ ಉಪ ತಹಸೀಲ್ದಾರ್ ನೇತೃತ್ವದಲ್ಲಿ ನಾಡ ಕಚೇರಿ ಸಭಾಂಗಣದಲ್ಲಿ ಪೌತಿ ಖಾತೆ ಆಂದೋಲನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪತಹಸೀಲ್ದಾರ್ ಶಿವಪ್ಪ ಮಾತನಾಡಿ, ಸರಕಾರ ಮಹತ್ತರ ಯೋಜನೆಗಳಲ್ಲಿ ಪೌತಿ ಖಾತೆ ಆಂದೋಲನ ಒಂದಾಗಿದೆ. ಪೌತಿಖಾತೆ ಹೊಂದಲು ರೈತಾಪಿ ವರ್ಗದವರು ಕಛೇರಿಯಿಂದ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ಅಧಿಕಾರಿಗಳನ್ನು ಕಳುಹಿಸಿ ಪೌತಿ ಖಾತೆ ದಾಖಲೆ ಮಾಡಿಕೊಡಲಾಗುತ್ತಿದೆಯೆಂದು ತಿಳಿಸಿದರು. ಸುಂಟಿಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಅಯೋಜಿತ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ, ಉಲುಗುಲಿ ಹಾಗೂ ನಾರ್ಗಾಣೆ ಗ್ರಾಮದ ಕೃಷಿಕರು ಹಾಗೂ ಸಾರ್ವಜನಿರು ಪಾಲ್ಗೊಂಡಿದ್ದರು. ಈ ಸಂದರ್ಭ ಕಂದಾಯ ಪರಿವೀಕ್ಷಕರಾದ ಪ್ರಶಾಂತ್,ಗ್ರಾಮ ಲೆಕ್ಕಿಗರಾದ ನಾಗೇಂದ್ರ, ಜಯಂತ್, ನಸೀಮ ಹಾಗೂ ಗ್ರಾಮ ಸಹಾಯಕರು ಇದ್ದರು.
ಮಡಿಕೇರಿ ಜೂ.7 : ಶಿಥಿಲಾವಸ್ಥೆಯಲ್ಲಿರುವ ನಾಗರಹೊಳೆ ಅಂಗನವಾಡಿ ಕೇಂದ್ರದ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಅಂಗನವಾಡಿ ಕೇಂದ್ರಕ್ಕೆ ಶೆಡ್ ಅಳವಡಿಸುವ ಕಾರ್ಯ ಪ್ರಾರಂಭಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಮಂಜುನಾಥ್ ತಿಳಿಸಿದ್ದಾರೆ.
ಸೋಮವಾರಪೇಟೆ ಜೂ.7 : ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರಪೇಟೆ ಜ್ಞಾನ ವಿಕಾಸ ಶಾಲೆಯ ವಿದ್ಯಾರ್ಥಿನಿ ಎಸ್.ಎನ್. ಧನ್ಯ 598 ಅಂಕಗಳಿಸಿದ್ದು, ಅವರಿಗೆ ವೈದ್ಯರಾದ ಡಾ.ಶೆಟ್ಟಿ ಅವರು ರೂ.5000 ನಗದು ನೀಡಿ ಪ್ರೋತ್ಸಾಹಿಸಿದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಾಜು, ಪದಾಧಿಕಾರಿಗಳಾದ ಎಸ್.ವೆಂಕಟೇಶ್, ಡಾ. ವಸಂತ್, ಶಾಲಾ ಮುಖ್ಯ ಶಿಕ್ಷಕಿ ಪಿ.ಕೆ. ಲಕ್ಷ್ಮೀ ಇದ್ದರು.
ನಾಪೋಕ್ಲು ಮಾ.7 : ನಾಪೋಕ್ಲುವಿನ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಪಾಲ್ಗೊಂಡು ಮಾತನಾಡಿ, ಪರಿಸರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ, ಗಿಡವನ್ನು ನೆಟ್ಟರೆ ಸಾಲದು. ಅದು ಬೆಳೆಯುವ ವರೆಗೆ ಅದನ್ನು ಪೋಶಿಸುವಂತ್ತಾಗಬೇಕು ಎಂದರು. ಶಾಲೆಯ ಪ್ರಭಾರ ಉಪ ಪ್ರಾಂಶುಪಾಲ ಎನ್.ಎಸ್.ಶಿವಣ್ಣ, ಶಾಲೆಯ ಉಪನ್ಯಾಸಕ ಹಾಗೂ ಶಿಕ್ಷಕವೃಂದ, ಆಡಳಿತ ಮಂಡಳಿ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು. ನಾಪೋಕ್ಲುವಿನ ಕೆಪಿಎಸ್, ಶ್ರೀರಾಮ ಟ್ರಸ್ಟ್, ಸೆಕ್ರೆಡ್ ಹಾರ್ಟ್, ಹೊದವಾಡ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಹಲವು ಶಾಲೆಗಳಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಜೂ.7 : ಮರಂದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ, ಭದ್ರಕಾಳಿ ದೇವರ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಎರಡು ವರ್ಷಕ್ಕೊಮ್ಮೆ ಉತ್ಸವ ನಡೆಯುವುದು ಇಲ್ಲಿನ ವಿಶೇಷ. ಮುಂಜಾನೆ ಕಲಿಯಪಾತ್ರೆಯನ್ನು ಪ್ರತಿ ಕುಟುಂಬದಿಂದ ದೇವಾಲಯಕ್ಕೆ ತರಲಾಯಿತು. ಮಧ್ಯಾಹ್ನ ಎತ್ತುಪೋರಾಟ ಹಾಗೂ ಬೊಳಕಾಟ್ ನಡೆದ ಬಳಿಕ ಮಹಾಪೂಜೆಗಳು ಜರುಗಿದವು. ನಂತರ ಅಯ್ಯಪ್ಪ ಮತ್ತು ಶಾಸ್ತಾವು ತೆರೆಗಳು ಜರುಗಿ ಮಧ್ಯಾಹ್ನ ಭದ್ರಕಾಳಿ ಮತ್ತು ಪಡಮಾಳಿ ತೆರೆಗಳು ನೆರವೇರಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ಕಾಣಿಕೆ ಒಪ್ಪಿಸಿದರು. ಈ ಸಂದರ್ಭ ತಕ್ಕ ಮುಖ್ಯಸ್ಥರಾದ ಮಾರ್ಚಂಡ ರಮೇಶ್ ಅಯ್ಯಪ್ಪ, ಮುಕ್ಕಾಟಿರ ರಮೇಶ್, ಲಾಲು ಚಿಣ್ಣಪ್ಪ, ಚಂಗೊಲು ಚಂಡಿರ ಉತ್ತಪ್ಪ ಮತ್ತು 13 ಕುಟುಂಬಸ್ಥರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ
ಸೋಮವಾರಪೇಟೆ ಜೂ.7 : ಬೆಟ್ಟದಳ್ಳಿ ಗ್ರಾ.ಪಂ ವ್ಯಾಪ್ತಿಯ ಶಾಂತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿನಿತ್ಯ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಪೂಜಾ ಕೈಂಕರ್ಯಗಳು ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ.ಚಂಗಪ್ಪ, ಕುಮಾರಳ್ಳಿ ಗ್ರಾಮ ಪುಷ್ಪಗಿರಿ ತಪ್ಪಲಿನಲ್ಲಿರುವ ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು, ಯಾತ್ರಾರ್ಥಿಗಳು ಬರುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯದಿಂದಲೂ ಭಕ್ತಾದಿಗಳು ಬರುತ್ತಾರೆ. ದೇವಸ್ಥಾನದ ಮೊದಲ ಪೂಜೆ ಬೆಳಿಗ್ಗೆ 8 ಗಂಟೆಯಿಂದ 10-30 ರವರೆಗೆ, ಮಧ್ಯಾಹ್ನ 12.45ರಿಂದ 2 ಗಂಟೆಯವರೆಗೆ ಪೂಜೆ ನಡೆಯಲಿದೆ. ಸಂಜೆ 4ರವರೆಗೆ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಭಕ್ತಾದಿಗಳು, ಯಾತ್ರಾರ್ಥಿಗಳು ಸಹಕರಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಆಡಳಿತ ಮಂಡಳಿ ಕಾರ್ಯದರ್ಶಿ ಡಿ.ಬಿ.ವಿಜಯ ಕುಮಾರ್,ಸದಸ್ಯರಾದ ಡಿ.ಬಿ.ಮೊಗಪ್ಪ ಇದ್ದರು.
ಸೋಮವಾರಪೇಟೆ ಜೂ 7 : ಸಾಮಾಜಿಕ ಅರಣ್ಯ ವಲಯ, ಸೋಮವಾರಪೇಟೆ ಹಾಗೂ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಗಿಡನೆಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪಕ್ಕೆ ಹಸಿರೀಕರಣ ಶಾಶ್ವತ ಪರಿಹಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಕೆ.ವಿ. ಗಾನಶ್ರೀ ಮಾತನಾಡಿ, ವಿಶ್ವ ಪರಿಸರ ದಿನ ಅರ್ಥಪೂರ್ಣವಾಗಬೇಕಾದರೆ ನೆಟ್ಟಿರುವ ಗಿಡ ಮರವಾಗಿ ಫಲದಾಯಕವಾಗಬೇಕು. ಈ ಕಾರ್ಯ ಸಫಲತೆ ಪರಿಸರದ ಅರಿವು ಮತ್ತು ಕಾಳಜಿ ಇದ್ದವರಿಗೆ ಮಾತ್ರ ಸಾಧ್ಯ. ಇಡೀ ತಾಲ್ಲೂಕಿಗೆ ಮಾದರಿಯಾಗುವಂತ ನೆಡುತೋಪು ನಿರ್ಮಾಣ ಮಾಡಲು ಬಿಟಿಸಿಜಿ ಕಾಲೇಜನ್ನು ಆಯ್ಕೆ ಮಾಡಲಾಗಿದೆ. ಕಾಲೇಜಿನ ಸಹಕಾರದೊಂದಿಗೆ ಮಾದರಿ ನಡುತೋಪು ನಿರ್ಮಾಣ ಮಾಡುವುದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರೇಮ ಬೆಳೆಯುತ್ತದೆ ಹಾಗೂ ಕಾಲೇಜಿನ ಆರ್ಥಿಕ ಸಂಪನ್ಮೂಲವು ಆಗುತ್ತದೆ ಎಂದು ತಿಳಿಸಿದರು.…
ಮಡಿಕೇರಿ ಜೂ.7 : ಪಾಲಿಬೆಟ್ಟ, ಟಾಟಾ ಸಂಸ್ಥೆಯ ಎಮ್ಮೆ ಗುಂಡಿ ವಿಭಾಗದ ಸಿಬ್ಬಂದಿಗಳು ಹಾಗೂ ಕಾರ್ಮಿಕರಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಯಿತು. ಪಾಲಿಬೆಟ್ಟದ ಆರೋಗ್ಯ ಕೇಂದ್ರ, ಶಾಲೆ, ಪಟ್ಟಣದ ಸುತ್ತಮುತ್ತಲಿನಲ್ಲಿದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯದ ವಸ್ತುಗಳನ್ನ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಎಮ್ಮೆಗುಂಡಿ ತೋಟದ ಮೇಲ್ವಿಚಾರಕ ಸತೀಶ್, ಪ್ರಮುಖರಾದ ಪ್ರದೀಪ್ ಸುರೇಶ್, ಅಕ್ಷಯ್, ಚಟ್ಟಿಯಪ್ಪ, ನಾಗರಾಜ್, ಆಸ್ಪತ್ರೆಯ ಸಿಬ್ಬಂದಿಗಳಾದ ಜಯ ಚಿತ್ರ, ನೀಲಮ್ಮ ಸೇರಿದಂತೆ ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಜೂ.7 : ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯ ಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಪರಿಸರವನ್ನು ಉಳಿಸುವುದು ಮತ್ತು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ಜಾಗತಿಕ ತಾಪಮಾನದ ಏರಿಕೆಗೆ ಪರಿಸರ ನಾಶವೇ ಕಾರಣ. ವಿದ್ಯಾರ್ಥಿಗಳು ಪರಿಸರದ ಬಗೆಗಿನ ಕಾಳಜಿಯನ್ನು ಅಧ್ಯತಾ ಕಾರ್ಯವಾಗಿ ಮೈಗೂಡಿಸಿಕೊಳ್ಳಬೇಕಾಗಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಹ ಕಾರ್ಯದರ್ಶಿ ಪೊಡಮಾಡ ಮೋಹನ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ಉಪನ್ಯಾಸಕರಾದ ಪ್ರತಿಭಾ ಉತ್ತಪ್ಪ, ರಾಘವೇಂದ್ರ, ತಿಮ್ಮರಾಜು, ಸುಬ್ಬಯ್ಯ ಸೇರಿದಂತೆ ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಸಸಿ ನಡುವುದರ ನಂತರ ಬಾಳೆಲೆ ಪಟ್ಟಣದಲ್ಲಿ ಪರಿಸರ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಪ್ರದರ್ಶನ ಹಾಗೂ ಘೋಷಣೆ ಜಾಗೃತಿ ಮೂಡಿಸಲಾಯಿತು.






