ಮಡಿಕೇರಿ ಜ.16 : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಉದ್ಯಮಿ ಅಕ್ಕಳತಂಡ ಎಸ್. ಮೊಯ್ದು ಅವರ ಪ್ರಾಯೋಜಕತ್ವದಲ್ಲಿ ಹೊರತರಲಾದ ಪ್ರಸಕ್ತ ಸಾಲಿನ ಕ್ಯಾಲೆಂಡರ್ (ದಿನದರ್ಶಿ) ಅನ್ನು ಬಿಡುಗಡೆಗೊಳಿಸಲಾಯಿತು.
ವಿರಾಜಪೇಟೆಯಲ್ಲಿರುವ ಕೆ. ಎಂ. ಎ. ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಿಗೂ ಆಗಿರುವ ನಿವೃತ್ತ ಅಬಕಾರಿ ಉಪನಿರೀಕ್ಷಕರಾದ ಆಲೀರ ಎಂ. ಹುಸೈನ್ ಅವರು ನೂತನ ಕೆ. ಎಂ. ಎ. ಕ್ಯಾಲೆಂಡರನ್ನು ಅನಾವರಣಗೊಳಿಸಿದರು.
ಬಳಿಕ ಕ್ಯಾಲೆಂಡರ್ ನ ಮೊದಲ ಪ್ರತಿಯನ್ನು ಕೆ. ಎಂ. ಎ. ಸಂಸ್ಥೆಯ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರಿಗೆ ಹಸ್ತಾಂತರಿಸುವ ಮೂಲಕ ಕ್ಯಾಲೆಂಡರ್ ವಿತರಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಲೀರ ಎಂ. ಹುಸೈನ್ , ಸೇವೆ ಮಾಡಲು ಯಾವುದೇ ನಿರ್ದಿಷ್ಟ ಆಯಾಮಗಳಿಲ್ಲ. ನಿಸ್ವಾರ್ಥವಾಗಿ ಮಾಡುವ ಜನೋಪಯೋಗಿ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಸಂಸ್ಥೆಯ ವತಿಯಿಂದ ಕಳೆದ 6 ವರ್ಷಗಳಿಂದ ಹೊರತರಲಾಗುತ್ತಿರುವ ಕ್ಯಾಲೆಂಡರ್ ಹೆಚ್ಚು ಉಪಯುಕ್ತವಾಗುತ್ತಿದೆ. ಇದನ್ನು ನಿರಂತರವಾಗಿ ಪ್ರಾಯೋಜಿಸುತ್ತಿರುವ ಅಕ್ಕಳತಂಡ ಎಸ್.ಮೊಯ್ದು ಅವರ ಸಾಮಾಜಿಕ ಸೇವೆ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ನಿರ್ದೇಶಕರಾದ ನಿವೃತ್ತ ಉಪ ತಹಶೀಲ್ದಾರ್ ಚಿಮ್ಮಿಚೀರ ಅಬ್ದುಲ್ಲಾ ಹಾಜಿ, ಪದಾಧಿಕಾರಿಗಳಾದ ವಿರಾಜಪೇಟೆ ತಾ.ಪಂ. ಮಾಜಿ ಸದಸ್ಯ ಗುಂಡಿಕೆರೆಯ ಕುವೇಂಡ ವೈ. ಆಲಿ, ಹೊದವಾಡದ ಹರಿಶ್ಚಂದ್ರ ಎ. ಹಂಸ, ಹಳ್ಳಿಗಟ್ಟಿನ ಚಿಮ್ಮಿಚೀರ ಕೆ. ಇಬ್ರಾಹಿಂ, ಚಾಮಿಯಾಲದ ಪುದಿಯಾಣೆರ ಹನೀಫ್, ಕೊಟ್ಟೋಳಿಯ ಮೀತಲತಂಡ ಎಂ. ಇಸ್ಮಾಯಿಲ್, ಬೇಟೋಳಿಯ ಮಂಡೇಡ ಎ. ಮೊಯ್ದು, ಅಂಬಟ್ಟಿಯ ಕರತೋರೆರ ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು.