ಮಡಿಕೇರಿ ಜ.25 : ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಿತ್ರಕ್ಕೆ ಅಂತರಾಷ್ಟ್ರೀಯ ಗ್ರ್ಯಾಂಡ್ ಗ್ಲೋರಿ ಫಿಲ್ಮ್ ಪ್ರಶಸ್ತಿ ಲಭಿಸಿದೆ.
ಮಣಿಪುರದಲ್ಲಿ ನಡೆದ ಐಜಿಜಿಎಫ್‍ಎ ಇಂಪಾಲಾ ಇಂಡಿಯಾ ಸಿನಿಮೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಪ್ರಾಯೋಗಿಕ ಚಿತ್ರ ಹಾಗೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಚಿತ್ರದ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಸಿನಿಮೋತ್ಸವದಲ್ಲಿ 1145 ಚಿತ್ರಗಳು ಪ್ರದರ್ಶನ ಕಂಡಿದ್ದು, ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಚಿತ್ರಗಳಲ್ಲಿ “ನಾಡ ಪೆದ ಆಶಾ” ಕೂಡ ಒಂದು. ಸ್ತ್ರೀ ಪ್ರಧಾನ ಕಥಾವಸ್ತುವಿನ “ನಾಡ ಪೆದ ಆಶಾ” 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡು ಕೊಡಗು ಜಿಲ್ಲೆಯಾದ್ಯಂತ 123 ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ನಡೆದ ಅಂತರರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ “ನಾಡ ಪೆದ ಆಶಾ” ಕೊಡವ ಚಿತ್ರ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ, ವಿಕೆ3 ಪಿಕ್ಚರ್ಸ್ ಬ್ಯಾನರಿನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣದ ಚಿತ್ರ ಇದಾಗಿದ್ದು, ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ಕಾದಂಬರಿಯನ್ನು ಆಧರಿಸಿ ಚಿತ್ರಿಸಲಾಗಿದೆ.
ಚಿತ್ರದಲ್ಲಿ ಬೊಳ್ಳಜಿರ ಬಿ.ಅಯ್ಯಪ್ಪ ನಾಯಕ ನಟರಾಗಿ ಅಭಿನಯಿಸಿದ್ದು, ನೆಲ್ಲಚಂಡ ರಿಷಿ ಪೂವಮ್ಮ, ಅಡ್ಡಂಡ ಅನಿತಾ ಕಾರ್ಯಪ್ಪ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ವಾಂಚಿರ ವಿಠಲ್ ನಾಣಯ್ಯ, ಚೇರುವಾಳಂಡ ಸುಜಲ ನಾಣಯ್ಯ, ಈರಮಂಡ ಹರಿಣಿ ವಿಜಯ್, ಕುಶಿ ಕಾವೇರಮ್ಮ, ಕೇಸರಿ ಬೋಜಮ್ಮ, ಕೊಟ್ಟುಕತ್ತೀರ ಆರ್ಯ ದೇವಯ್ಯ, ಮಾಚಂಗಡ ಶರತ್ ಮುಖ್ಯ ಭೂಮಿಕೆಯಲ್ಲಿದ್ದಾರೆ.