ಭಾರತ ದೇಶದಲ್ಲಿ ಪ್ರತಿ ವರ್ಷ ಜನವರಿ 26 ಅನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. 26 ಜನವರಿ 1950 ರಂದು ಭಾರತದ ಸಂವಿಧಾನ ಜಾರಿಗೆ ಬಂದಾಗಿನಿಂದ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಾಮುಖ್ಯತೆಯನ್ನು ಗೌರವಿಸಲು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಭಾರತ ಸ್ವತಂತ್ರವಾದ ನಂತರ ಸಂವಿಧಾನ ಸಭೆಯನ್ನು ಘೋಷಿಸಲಾಯಿತು ಸಂವಿಧಾನ ಸಭೆಯ ಸದಸ್ಯರನ್ನು ಭಾರತದ ರಾಜ್ಯ ಅಸೆಂಬ್ಲಿಗಳ ಚುನಾಯಿತ ಸದಸ್ಯರು ಆಯ್ಕೆ ಮಾಡಿದರು. ಡಾ.ಭೀಮರಾವ್ ಅಂಬೇಡ್ಕರ್, ಜವಾಹರಲಾಲ್ ನೆಹರು, ಡಾ.ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್ ಮೊದಲಾದವರು ಈ ಸಭೆಯ ಪ್ರಮುಖ ಸದಸ್ಯರಾಗಿದ್ದರು.
ಜನವರಿ 26 ರಂದು ದೇಶದಾದ್ಯಂತ ಸಂವಿಧಾನವು ಜಾರಿಗೆ ಬಂದಿತು. ಇದರ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು, ಸಂವಿಧಾನದಲ್ಲಿ ಭಾರತದ ಗಣರಾಜ್ಯ ಸ್ವರೂಪವನ್ನು ಗುರುತಿಸಿದೆ. ಈ ದಿನವನ್ನು ಭಾರತ ಸರ್ಕಾರವು ದೇಶಾದ್ಯಂತ ರಜೆ ಎಂದು ಘೋಷಿಸಿದೆ. ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮದಿಂದ ನಡೆಯುತ್ತದೆ. ಪ್ರತಿ ವರ್ಷ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾರ್ಯಕ್ರಮ ಮತ್ತು ಇಂಡಿಯಾ ಗೇಟ್‍ನಲ್ಲಿ ವಿಶೇಷ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಮೂರು ಸೇನೆಗಳು ವಿಜಯ್ ಚೌಕ್‍ನಿಂದ ತಮ್ಮ ಪರೇಡ್ ಅನ್ನು ಪ್ರಾರಂಭಿಸುತ್ತವೆ.
ಇದರಲ್ಲಿ ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಆರ್ಮಿ ಬ್ಯಾಂಡ್‍ಗಳು, ಎನ್‍ಸಿಸಿ ಕೆಡೆಟ್‍ಗಳು ಮತ್ತು ಪೆÇಲೀಸ್ ಪಡೆಗಳು ವಿವಿಧ ಮಧುರ ಗೀತೆಗಳ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸುತ್ತವೆ. ರಾಜ್ಯಗಳಲ್ಲೂ ರಾಜ್ಯಪಾಲರ ಸಮ್ಮುಖದಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ನಮ್ಮ ಭಾರತ ದೇಶವು ಗಣರಾಜ್ಯ ರಾಷ್ಟ್ರವಾಗಿ ವಿಶ್ವ ವೇದಿಕೆಯಲ್ಲಿ ಸ್ಥಾಪನೆಯಾದಾಗ ನಾವು ಸ್ವತಂತ್ರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದಾದರೆ ಅಥವಾ ಯಾವುದೇ ರೀತಿಯ ದಬ್ಬಾಳಿಕೆ ಮತ್ತು ದುರಾಡಳಿತದ ವಿರುದ್ಧ ಧ್ವನಿ ಎತ್ತಬಹುದಾದರೆ, ಅದು ನಮ್ಮ ದೇಶದ ಸಂವಿಧಾನ ಮತ್ತು ಗಣರಾಜ್ಯ ಸ್ವರೂಪದಿಂದ ಮಾತ್ರ ಸಾಧ್ಯವಾಗಿದೆ. ಇದೇ ಕಾರಣಕ್ಕೆ ನಮ್ಮ ದೇಶದಲ್ಲಿ ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ.
1947 ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಕರಡು ಸಮಿತಿ ರಚನೆ ಮಾಡಲಾಯಿತು. ಸಮಿತಿಯು ಅದೇ ವರ್ಷ ನ.4 ರಂದು ಶಾಸನ ಸಭೆಯಲ್ಲಿ ಸಂವಿಧಾನದ ಕರಡು ಪ್ರತಿಯನ್ನು ಮಂಡಿಸಿತು. 1949, ನ.26ರಂದು ಶಾಸನ ಸಭೆ ಕರಡು ಪ್ರತಿಯಲ್ಲಿ ಅನೇಕ ತಿದ್ದುಪಡಿಗಳ ಬಳಿಕ ಅಂಗೀಕಾರ ಮಾಡಿತು. ಇದಕ್ಕೂ ಮುನ್ನ ಅಂದರೆ, 1929ರ ಜ.26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಘೋಷಣೆ ಮಾಡಿತ್ತು. ಲಾಹೋರ್‍ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು. ಈ ದಿನವನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ 1950ರ ಜ.26 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು.
::: ಅತಿ ದೊಡ್ಡ ಲಿಖಿತ ಸಂವಿಧಾನ :::
ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ. ಇದರಲ್ಲಿ ಒಂದು ಮುನ್ನುಡಿ, 22 ಭಾಗಗಳು, 12 ಪರಿಚ್ಛೇದಗಳು, 448 ವಿಧಿಗಳು, 5 ಅನುಬಂಧಗಳು ಹಾಗೂ 113 ತಿದ್ದುಪಡಿಗಳು ಇವೆ. ಇಂಗ್ಲಿμïನ ಸಂವಿಧಾನ ಪ್ರತಿಯಲ್ಲಿ 1,17,369 ಪದಗಳಿವೆ. ಸಂವಿಧಾನ ರಚನೆಯಾಗುವ ಮುನ್ನ ಅದರ ಕರಡು ಸುಮಾರು 2000 ಬಾರಿ ತಿದ್ದುಪಡಿಗೆ ಒಳಗಾಗಿದೆ. ಇದು ಕೈಬರಹದಲ್ಲಿರುವ ಅತಿ ದೊಡ್ಡ ಸಂವಿಧಾನವೂ ಹೌದು.
ಮೂಲದಲ್ಲಿ ಇದನ್ನು ಟೈಪ್ ಮಾಡಿರಲಿಲ್ಲ ಅಥವಾ ಪ್ರಿಂಟ್ ಕೂಡ ಮಾಡಿರಲಿಲ್ಲ. ಇದನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಂಪೂರ್ಣ ಕೈಬರಹದಲ್ಲಿ ಬರೆದು, ಕ್ಯಾಲಿಗ್ರಾಫ್ ಮಾಡಲಾಗಿದೆ. ಇದನ್ನು ಕೈಬರಹದಲ್ಲಿ ಪೂರ್ತಿಯಾಗಿ ಬರೆದವರು ಪ್ರೇಮ್ ಬಿಹಾರಿ ನಾರಾಯಣ್ ರೈಜದಾ. ನಂತರ ಇದನ್ನು ಡೆಹ್ರಾಡೂನ್‍ನಲ್ಲಿ ಮುದ್ರಿಸಿ ಫೋಟೋಲಿಥೋಗ್ರಾಫ್ ಮಾಡಲಾಯಿತು. ಮೂಲ ಸಂವಿಧಾನದ ಪ್ರತಿ ಪುಟವನ್ನೂ ಕಲಾತ್ಮಕವಾಗಿ ಸಿಂಗರಿಸಲಾಗಿದೆ. ಪ್ರತಿ ಪುಟದಲ್ಲೂ ಕೋಲ್ಕೊತ್ತಾದ ಶಾಂತಿನಿಕೇತನದ ಕಲಾವಿದರು ಭಾರತೀಯ ಪುರಾಣ ಹಾಗೂ ಇತಿಹಾಸದ ಚಿತ್ರಗಳನ್ನು ಬರೆದು ಕಳೆಗಟ್ಟಿಸಿದ್ದಾರೆ. ಬೇವಹರ್ ರಾಮಮನೋಹರ ಸಿನ್ಹಾ ಹಾಗೂ ನಂದಲಾಲ್ ಬೋಸ್ ಅವರಲ್ಲಿ ಪ್ರಮುಖರು.
ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿ, ಸ್ವತಂತ್ರ ಗಣರಾಜ್ಯವಾದ ದಿನವನ್ನು ಗಣರಾಜ್ಯೋತ್ಸವ ದಿನ ಎನ್ನಲಾಗುತ್ತದೆ. ಈ ಪ್ರಯುಕ್ತ ಹೊಸದಿಲ್ಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಆಕರ್ಷಕ ಪರೇಡ್ ನಡೆಯುತ್ತದೆ. ದೇಶಾದ್ಯಂತ ಗಣರಾಜ್ಯೋತ್ಸವವನ್ನು ಧ್ವಜಾರೋಹಣ ಮೂಲಕ ಆಚರಿಸಲಾಗುತ್ತದೆ. ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಗಳು ಧ್ವಜಾರೋಹಣ ಮಾಡಿದರೆ ರಾಜ್ಯಗಳಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಧ್ವಜಾರೋಹಣ ಮಾಡುತ್ತಾರೆ.
ಗಣರಾಜ್ಯ ದಿನ ರಾಷ್ಟ್ರಪತಿಗಳು ಹೊಸದಿಲ್ಲಿಯ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಸ್ಮಾರಕಕ್ಕೆ ಗೌರವ ಸಲ್ಲಿಸಿ, ಜನ್‍ಪಥದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಆ ಬಳಿಕ ಭಾರತೀಯ ಸೇನಾಪಡೆಗಳಿಂದ ಆಕರ್ಷಕ ಪಥ ಸಂಚಲನ ನಡೆಯುತ್ತದೆ. ದೇಶದ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳನ್ನೂ ಪ್ರದರ್ಶಿಸಲಾಗುತ್ತದೆ
ಭಾರತ ತನ್ನ ಮಿಲಿಟರಿ ಪರಾಕ್ರಮವನ್ನು ಪ್ರದರ್ಶಿಸುವುದಲ್ಲದೆ, ಇಲ್ಲಿನ ವೈವಿಧ್ಯಮಯ ಸಂಸ್ಕøತಿಯ ಅನಾವರಣವೂ ಆಗುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ನೀಡಲಾಗುತ್ತದೆ. ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ರಿಂಗ್ಲೆಟ್ ಹಾಕುವ ಮೂಲಕ ಭಾರತದ ಪ್ರಧಾನಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಬಳಿಕ 21-ಗನ್ ಸೆಲ್ಯೂಟ್, ರಾಷ್ಟ್ರಧ್ವಜಾರೋಹಣ ಮತ್ತು ರಾಷ್ಟ್ರಗೀತೆಯನ್ನು ಹೆಮ್ಮೆಯಿಂದ ಹಾಡಲಾಗುತ್ತದೆ. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕಚಕ್ರ ಮತ್ತು ವೀರಚಕ್ರದ ರೂಪದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆಪತ್ಕಾಲದಲ್ಲಿ ಧೈರ್ಯ ತೋರಿದ ಮಕ್ಕಳು ಮತ್ತು ಸಾಮಾನ್ಯ ನಾಗರಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಶೌರ್ಯ ಪ್ರಶಸ್ತಿಗಳ ವಿಜೇತರು ಮಿಲಿಟರಿ ಜೀಪ್‍ಗಳಲ್ಲಿ ರಾಷ್ಟ್ರಪತಿಗೆ ಸೆಲ್ಯೂಟ್ ಮಾಡುತ್ತಾರೆ. ಇದರ ನಂತರ ಭಾರತವು ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುತ್ತದೆ. ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್‍ನಿಂದ ಪಥಸಂಚಲನ ಸೇರಿದಂತೆ ವಿವಿಧ ರೆಜಿಮೆಂಟ್‍ಗಳಿಂದ ಭಾರತದ ಪ್ರಥಮ ಪ್ರಜೆ, ರಾಷ್ಟ್ರಪತಿ ಗೌರವ ವಂದನೆ ಸ್ವೀಕರಿಸುತ್ತಾರೆ. ಭಾರತೀಯ ವಾಯುಪಡೆಯ ಫೈಟರ್ ಜೆಟ್‍ಗಳು ಜನಪಥ್‍ನಲ್ಲಿ ಹಾರಾಟ ನಡೆಸಿ ಪರಾಕ್ರಮ ಪ್ರದರ್ಶಿಸುವ ಮೂಲಕ ಮೆರವಣಿಗೆ ಕೊನೆಗೊಳ್ಳುತ್ತದೆ.
ದೆಹಲಿಯು ಭಾರತದ ರಾಜಧಾನಿಯಾಗಿದ್ದು, ಗಣರಾಜ್ಯೋತ್ಸವದ ಅತಿದೊಡ್ಡ ಆಚರಣೆಗೆ ಸಾಕ್ಷಿಯಾಗಿದೆ. ಗಣರಾಜ್ಯೋತ್ಸವದ ಪರೇಡ್‍ನ ಲೈವ್ ವೆಬ್‍ಕಾಸ್ಟ್ ಕೂಡಾ ಮಾಡಲಾಗುತ್ತದೆ. ಈ ಮೂಲಕ ಪ್ರತಿ ವರ್ಷ ಆಕರ್ಷಕ ಪರೇಡ್ ವೀಕ್ಷಿಸಲು ಬಯಸುವ ಲಕ್ಷಾಂತರ ಜನರು ಇಂಟರ್ನೆಟ್ ಮೂಲಕ ನೋಡಬಹುದಾಗಿದೆ.
::: ಜನಗಣಮನ ರಾಷ್ಟ್ರಗೀತೆಯಾಯಿತು :::
ಸಂವಿಧಾನ ಸಭೆಯು 1950ರ ಜ.24ರಂದು ರವೀಂದ್ರನಾಥ ಟಾಗೋರ್ ವಿರಚಿತ ‘ಜನಗಣಮನ ಅಧಿನಾಯಕ ಜಯ ಹೇ’ ಪದ್ಯವನ್ನು ಭಾರತದ ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದರು ಇದನ್ನು ಘೋಷಿಸಿದರು. ಇದರ ಜೊತೆಗೇ, ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬಂಕಿಮಚಂದ್ರ ಚಟರ್ಜಿ ವಿರಚಿತ “ವಂದೇ ಮಾತರಂ” ಗೀತೆಯನ್ನು “ರಾಷ್ಟ್ರೀಯ ಹಾಡು” ಎಂದು ಕರೆದು ಅದಕ್ಕೂ “ಜನಗಣಮನ”ದ ಸಮಾನ ಸ್ಥಾನಮಾನ ನೀಡಲಾಯಿತು.
“ಜನಗಣಮನ”ವನ್ನು ಟಾಗೋರ್ ಐದು ಚರಣಗಳಲ್ಲಿ ಬರೆದಿದ್ದರು. ‘ಭಾರತ ಭಾಗ್ಯ ವಿಧಾತ’ನನ್ನು ಸ್ತುತಿಸುವ ಗೀತೆಯಿದು. ದೇಶದ ಎಲ್ಲಾ ವೈವಿಧ್ಯಗಳನ್ನು, ಹಿರಿಮೆಗಳನ್ನು ಇದು ಸಾಕ್ಷೀಕರಿಸುತ್ತದೆ. ಇದನ್ನು ಸಾರ್ವಜನಿಕವಾಗಿ ಮೊದಲು ಹಾಡಿದ್ದು ಕಲ್ಕತ್ತಾದಲ್ಲಿ 1911ರ ಡಿಸೆಂಬರ್ 27ರಂದು ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ. ಆಗ ಅದು ಒಂದು ದೇಶಭಕ್ತಿ ಗೀತೆಯಾಗಿತ್ತು. ಕೆಲವೇ ತಿಂಗಳಲ್ಲಿ, ಟಾಗೋರ್ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ತತ್ವಬೋಧಿನಿ ಪತ್ರಿಕೆಯಲ್ಲಿ ಅದು ಪ್ರಕಟವಾಯಿತು.
::: ಮೊದಲ ಗಣತಂತ್ರ ಪರೇಡ್ ಹೀಗಿತ್ತು :::
1950ರ ಜನವರಿ 26 ರಂದು ದೇಶದ ಎಲ್ಲಾ ಕಡೆಗಳಲ್ಲಿ ಮುಂಜಾನೆ “ಪ್ರಭಾತ್ ಫೇರಿ”ಗಳು ನಡೆದವು. ದಿಲ್ಲಿಯಲ್ಲಿ ಪ್ರಥಮ ನಿಯೋಜಿತ ರಾಷ್ಟ್ರಪತಿ ಡಾ.ರಾಜೇಂದ್ರಪ್ರಸಾದ್ ಅವರು ರಾಜಘಾಟ್‍ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದರು. ನಂತರ “ಗವರ್ನ್‍ಮೆಂಟ್ ಹೌಸ್”ಗೆ (ಈಗಿನ ರಾಷ್ಟ್ರತಿ ಭವನ) ತೆರಳಿ ದೇಶದ ಮೊದಲ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರನ್ನು ಭೇಟಿಯಾದರು. ನಂತರ ಇಬ್ಬರೂ ದರ್ಬಾರ್ ಹಾಲ್‍ಗೆ ಆಗಮಿಸಿದರು.
ಅಲ್ಲಿ ರಾಜಗೋಪಾಲಾಚಾರಿಯವರು ಭಾರತವನ್ನು ಸ್ವತಂತ್ರ ಸಾರ್ವಭೌಮ ರಾಷ್ಟ್ರವೆಂದು ಘೋಷಿಸಿದರು. ನಂತರ ರಾಜೇಂದ್ರಪ್ರಸಾದ್‍ರಿಗೆ ಆಗಿನ ಮುಖ್ಯ ನ್ಯಾಯಮೂರ್ತಿ ಹರಿಲಾಲ್ ಕಾನಿಯಾ ಅವರು ಪ್ರಮಾಣವಚನ ಬೋಧಿಸಿದರು. 10.30ರ ಹೊತ್ತಿಗೆ ಗವರ್ನರ್ ಜನರಲ್ ಅವರ ಧ್ವಜವನ್ನು ಕೆಳಗಿಳಿಸಿ, ತ್ರಿವರ್ಣ ಧ್ವಜವನ್ನು ಏರಿಸಲಾಯಿತು.
ಈ ಧ್ವಜ ಈಗಿನ ಧ್ವಜದಂತಿರಲಿಲ್ಲ, ಅದರಲ್ಲಿ ನಾಲ್ಕು ವಿಭಾಗಗಳಿದ್ದವು. ಮೊದಲ ಭಾಗದಲ್ಲಿ ಅಶೋಕನ ಸಿಂಹಗಳು, ಎರಡನೇ ಭಾಗದಲ್ಲಿ ಅಜಂತಾ ಗುಹೆಯ 5ನೇ ಶತಮಾನದ ಚಿತ್ರ, ಮೂರನೇ ಭಾಗದಲ್ಲಿ ದಿಲ್ಲಿಯ ಕೆಂಪು ಕೋಟೆಯ ತೂಕಯಂತ್ರ, ನಾಲ್ಕನೇ ಭಾಗದಲ್ಲಿ ಸಾರಾನಾಥ ಸ್ತೂಪದ ಪದ್ಮದಳ ಇದ್ದವು. 1971ರಲ್ಲಿ ಈ ಧ್ವಜದ ಬದಲು ತಿರಂಗಾ ಬಂತು.
::: ಬುಲೆಟ್ ಇರಲ್ಲ :::
ಭವ್ಯ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಹೆಜ್ಜೆ ಹಾಕುವ ನೂರಾರು ಯೋಧರ ಕೈಗಳಲ್ಲಿರುವ ಅತ್ಯಾಧುನಿಕ ರೈಫಲ್ ಹಾಗೂ ಬಂದೂಕುಗಳಲ್ಲಿ ಯಾವುದರಲ್ಲೂ ಒಂದೇ ಒಂದು ಗುಂಡು ಇಲ್ಲದಂತೆ (ಗನ್ ಸೆಲ್ಯೂಟ್ ನೀಡುವ ದಳ ಹೊರತುಪಡಿಸಿ) ನೋಡಿಕೊಳ್ಳಲಾಗುತ್ತದೆ. ಪಥಸಂಚಲನದಲ್ಲಿ ಭಾಗವಹಿಸುವ ಪ್ರತಿಯೊಬ್ಬನನ್ನೂ ನಾಲ್ಕು ಬಾರಿ ಭದ್ರತಾ ಪರಿಶೀಲನೆಯ ಬಳಿಕವೇ ಒಳಬಿಡಲಾಗುತ್ತದೆ.
ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅತಿ ಗಣ್ಯರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದರಿಂದಾಗಿ ಈ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಭೂಸೈನ್ಯ ತುಕಡಿ ಯೋಧರು ದೇಶೀ ತಯಾರಿಯ “ಇನ್ಸಾಸ್” ರೈಫಲ್ಲನ್ನು ಹೊಂದಿರುತ್ತಾರೆ.
ರಾಜಪಥದಲ್ಲಿ ಗಣತಂತ್ರ ಪರೇಡ್ ನಡೆಯುವ ಪದ್ಧತಿ ರೂಢಿಗೆ ಬಂದುದು 1955ರಿಂದ. ಅಲ್ಲಿಯವರೆಗೆ, ಅಂದರೆ 1950ರಿಂದ 1955ರವರೆಗೆ ಇದನ್ನು ದಿಲ್ಲಿಯ ಕೆಂಪು ಕೋಟೆ, ನ್ಯಾಷನಲ್ ಸ್ಟೇಡಿಯಂ, ಕಿಂಗ್ಸ್‍ವೇ ಕ್ಯಾಂಪ್ ಹಾಗೂ ರಾಮಲೀಲಾ ಮೈದಾನದಲ್ಲಿ ನಡೆಸಲಾಗುತ್ತಿತ್ತು. ರಾಜಪಥವನ್ನು ಮೊದಲು ಕಿಂಗ್ಸ್‍ವೇ ಎಂದು ಕರೆಯಲಾಗುತ್ತಿತ್ತು.
ರಾಷ್ಟ್ರಪತಿಗಳು ರಾಷ್ಟ್ರಧ್ವಜ ಆರೋಹಣ ಮಾಡುವ ಸಂದರ್ಭದಲ್ಲಿ ನಡೆಸುವ 21 ಗನ್ ಸೆಲ್ಯೂಟ್‍ಗಳನ್ನು 7 ಫಿರಂಗಿಗಳ ಮೂಲಕ 3 ಸುತ್ತುಗಳಲ್ಲಿ ಮಾಡಲಾಗುತ್ತದೆ. ಬ್ಯಾಂಡ್‍ನಲ್ಲಿ ರಾಷ್ಟ್ರಗೀತೆ ಮೊಳಗುವ ಮುನ್ನ ಒಮ್ಮೆ, ರಾಷ್ಟ್ರಗೀತೆಯ ಬಳಿಕ ಎರಡು ಬಾರಿ ವಂದನೆ ನಡೆಯುತ್ತದೆ.
Breaking News
- *ಕುಶಾಲನಗರ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ*
- *ನ.17 ರಂದು ಎಲ್ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಮಡಿಕೇರಿಯಲ್ಲಿ ಚಿತ್ರಕಲಾ ಸ್ಪರ್ಧೆ*
- *ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಕೊಡಗು ಮರ್ಕರ ಟೆಕ್ವಾಂಡೋ ಕ್ಲಬ್ನ ವಿದ್ಯಾರ್ಥಿಗಳು ಆಯ್ಕೆ*
- *ಅರೆಕಾಡಿನಲ್ಲಿ ಗಮನ ಸೆಳೆದ ‘ನಾಡೊರ್ಮೆ’ ಕಾರ್ಯಕ್ರಮ : ಕೊಡವ ಸಂಸ್ಕೃತಿ-ಸಾಹಿತ್ಯ ಬೆಳವಣಿಗೆಗೆ ಮತ್ತಷ್ಟು ಶ್ರಮಿಸಿ : ಶಾಸಕ ಡಾ.ಮಂತರ್ ಗೌಡ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಯುವ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ : ವಿದ್ಯಾರ್ಥಿಗಳು ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ : ಎಸ್ಪಿ ಕೆ.ರಾಮರಾಜನ್*
- *”ಜೇಡ್ಲ ಗೋಕುಲ ತಿಲಕ” ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಕುಶಾಲನಗರ- ಶ್ರೀರಂಗಪಟ್ಟಣ ರಸ್ತೆ ಕಾಮಗಾರಿ ಶೀಘ್ರ ಪೂರ್ಣ : ಸಂಸದ ಯದುವೀರ್ ಭರವಸೆ*
- *ಹಾಕತ್ತೂರು, ಮೇಕೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಂಸದ ಯದುವೀರ್*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನಾಪೋಕ್ಲು : ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ*