ಮಡಿಕೇರಿ ಜ.25 : ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದೇವರಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಂದುಕೊರತೆ ಸಭೆ ನಡೆಯಿತು.
ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ನೇತೃತ್ವದಲ್ಲಿ, ಜಿಲ್ಲಾ ಸಂಚಾಲಕಿ (ಅಧ್ಯಕ್ಷೆ) ಗಾಯತ್ರಿ ನರಸಿಂಹ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ದೇವರಪುರ ಗ್ರಾ.ಪಂ ವ್ಯಾಪ್ತಿಯ ದೇವಮಚ್ಚಿ, ಅಕ್ಕೆಮಾಳ, ಕಾರೇಹಡ್ಲು ನಿವಾಸಿಗಳು ತಮ್ಮ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಈ ವ್ಯಾಪ್ತಿಯಲ್ಲಿ ಸುಮಾರು 60 ವರ್ಷಗಳಿಂದ ವಾಸವಿರುವ 25 ಕುಟುಂಬಗಳು, ಪರಿಶಿಷ್ಟ ಜಾತಿ, ಪ.ಪಂಗಡ 15 ಕುಟುಂಬಗಳು ಹಾಗೂ ಇತರೆ ಜಾತಿ ಕುಟುಂಬಗಳು ವಾಸವಿದ್ದು, ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ, ನೀರಿನ ಸಮಸ್ಯೆ, ಸಮುದಾಯ ಭವನ ಇಲ್ಲದಿರುವ ಬಗ್ಗೆ, ಮನೆ ನಿರ್ಮಾಣಕ್ಕೆ ಬಿಲ್ ಪಾವತಿ ಆಗದಿರುವ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಮಿತಿಯ ಪದಾಧಿಕಾರಿಗಳೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಅಲ್ಲದೆ ಆನೆಗಳ ಹಾವಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿವಾಸಿಗಳ ಸಮಸ್ಯೆಗಳನ್ನು ಸಂಬಂದಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ, ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಿ ಕೊಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭ 106 ವರ್ಷದ ಶತಾಯುಷಿ ಮಂಚಮ್ಮ ಅವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಸಂಘಟನಾ ಸಂಚಾಲಕ ರಘು, ವಿರಾಜಪೇಟೆ ತಾಲೂಕು ಸಂಚಾಲಕ(ಅಧ್ಯಕ್ಷ) ಮನು, ದಲಿತ ಮಹಿಳಾ ಒಕ್ಕೂಟದ ವಿರಾಜಪೇಟೆ ತಾಲೂಕು ಸಂಚಾಲಕಿ(ಅಧ್ಯಕ್ಷೆ) ರೇಖಾ ಮಹೇಶ್, ಸಂಘಟನಾ ಸಂಚಾಲಕಿ ಮಂಜುಳಾ, ಸಮಿತಿ ಸದಸ್ಯರಾದ ಕುಳಿಯ, ಸಿದ್ದ, ಸ್ಥಳೀಯರಾದ ಮುತ್ತಮ್ಮ, ಗಾಯಿತ್ರಿ, ದಲಿತ ಮುಖಂಡರಾದ ಬಸವರಾಜು, ಅಪ್ಪು ಇನ್ನಿತರರು ಹಾಜರಿದ್ದರು.