ಸೋಮವಾರಪೇಟೆ ಫೆ.13 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಪ.ಪಂ ಆಡಳಿತ ಮಂಡಳಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದೆ.
ನಗರೋತ್ಥಾನ ಯೋಜನೆಯಡಿ ಪ.ಪಂ ಗೆ ರೂ.2.26 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಪಟ್ಟಣದ ವಿವಿಧ ರಸ್ತೆಗಳ ಕಾಂಕ್ರಿಟೀಕರಣ, ಡಾಂಬರೀಕರಣ, ಚರಂಡಿ, ಮೋರಿ ನಿರ್ಮಾಣ ನಡೆಯುತ್ತಿದೆ. ಪ್ರಮುಖವಾಗಿ ಚರಂಡಿ ನಿರ್ಮಾಣದಲ್ಲಿ ತೀರಾ ಕಳಪೆ ಕಾಮಗಾರಿ ನಡೆದಿದೆ. ನೀರಿನ ರಭಸಕ್ಕೆ ಈ ಚರಂಡಿ ಕೊಚ್ಚಿ ಹೋಗುವುದು ಖಚಿತ.
ಶಾಸಕರು ಭೂಮಿಪೂಜೆ ನೆರವೇರಿಸಿ 2 ತಿಂಗಳಾದರೂ ಕಾಮಗಾರಿ ಚುರುಕುಗೊಳಿಸುವ ಬಗ್ಗೆ ಗುತ್ತಿಗೆದಾರ ಆಸಕ್ತಿ ತೋರುತ್ತಿಲ್ಲ. ವಲ್ಲಬಾಯಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯಲ್ಲಿ 2 ಅಡಿ ಆಳದ ಚರಂಡಿ ನಿರ್ಮಾಣಕ್ಕೆ ಒಂದೂವರೆ ಅಡಿಯಷ್ಟು, ಮೊದಲು 4 ಇಂಚು ಬೆಡ್ಡಿಂಗ್ ಹಾಕುವಲ್ಲಿ ಕೇವಲ ಒಂದೂವರೆ ಇಂಚಿನಷ್ಟು, 7 ಇಂಚಿಗೆ ಬದಲಾಗಿ 10 ಇಂಚಿಗೆ ಒಂದು ಕಬ್ಬಣದ ಸರಳು ಹಾಕುವ ಮೂಲಕ ಕಳಪೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಎಂದು ಕಾಮಗಾರಿಗಳನ್ನು ಪರಿಶೀಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು, ಸದಸ್ಯರುಗಳಾದ ಎಸ್.ಮಹೇಶ್ ಹಾಗೂ ಮೋಹಿನಿ ಆರೋಪಿಸಿದರು.
ಹೊಸದಾಗಿ ವೈಜ್ಞಾನಿಕ ರೂಪದಲ್ಲಿ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ರೇಂಜರ್ ಬ್ಲಾಕ್ ನಲ್ಲೂ ಕಾಂಕ್ರೀಟ್ ಹಾಕಿದ ಮಾರನೇ ದಿನವೇ ಸೆಂಟ್ರಿಂಗ್ ಬಿಚ್ಚಿದ್ದು ಚರಂಡಿ ಬಿರುಕು ಬಿಟ್ಟಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ಪ.ಪಂ ಪ್ರತಿನಿಧಿಗಳು ಹಾಗೂ ನಗರೋತ್ಥಾನ ಯೋಜನೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.
















