ಮಡಿಕೇರಿ ಫೆ.20 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ಮತ್ತು ಪುತ್ತೂರು, ಸುಳ್ಯ ಕಾಲೇಜಿನ ಎನ್.ಸಿ.ಸಿ. ಅಂತಿಮ ವರ್ಷದ ಕೆಡೆಟ್‍ಗಳಿಗೆ ಎನ್.ಸಿ.ಸಿ ಪ್ರಮಾಣಪತ್ರ ಪರೀಕ್ಷೆ ನಡೆಯಿತು.
ಪ್ರಾಯೋಗಿಕ ಮತ್ತು ಲಿಖಿತ ರೂಪದಲ್ಲಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಮ್ಯಾಪ್ ರೀಡಿಂಗ್, ಲೀಡರ್ಶಿಪ್, ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ, ಡ್ರಿಲ್, ಶಸ್ತ್ರಾಸ್ತ್ರ ತರಬೇತಿ ಮತ್ತು ಯುದ್ಧ ಕೌಶಲ್ಯ, ರಾಷ್ಟ್ರೀಯ ಭಾವೈಕ್ಯತೆ, ಆರೋಗ್ಯ ಮತ್ತು ನೈರ್ಮಲೀಕರಣ, ವಿಪತ್ತು ನಿರ್ವಹಣೆ, ಆತ್ಮರಕ್ಷಣೆ, ಸೈನಿಕ ಇತಿಹಾಸ, ಪರಿಸರ ಜಾಗೃತಿ ಮತ್ತು ಸಂರಕ್ಷಣೆ, ಸಾಮಾಜಿಕ ಜಾಗೃತಿ ಮತ್ತು ಸಮುದಾಯ ಅಭಿವೃದ್ಧಿ, ವೈದ್ಯಕೀಯ ಶ್ರೂಶುಷೆ ಇತ್ಯಾದಿ ವಿಷಯದ ಕುರಿತು ಒಟ್ಟು ಐನೂರು ಅಂಕಗಳನ್ನು ಒಳಗೊಂಡ ಪರೀಕ್ಷೆಯನ್ನು ನಡೆಸಲಾಯಿತು.
ಈ ಪರೀಕ್ಷೆಯಲ್ಲಿ ವಿವಿಧ ಕಾಲೇಜುಗಳ ಅರ್ಹ 25 ಪುರುಷ ಕೆಡೆಟ್‍ಗಳು, 44 ಅರ್ಹ ಮಹಿಳಾ ಕೆಡೆಟ್‍ಗಳು ಭಾಗವಹಿಸಿದ್ದರು.
ಪರೀಕ್ಷಾ ಕಾರ್ಯದಲ್ಲಿ ಉಡುಪಿ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್.ಕೆ. ಸಿಂಗ್, ಮಡಿಕೇರಿ ಬೆಟಾಲಿಯನಿನ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಚಾಕೋ, ಮೈಸೂರು ಬೆಟಾಲಿಯನಿನ ಮೇಜರ್ ಮಂಜುನಾಥ್, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ಮತ್ತು ಎನ್.ಸಿ.ಸಿ ಅಧಿಕಾರಿ ಮೇಜರ್ ಡಾ.ರಾಘವ್, ಬಿ.ಕ್ಯಾಪ್ಟನ್ ಬೀನಾ, ಲೆಫ್ಟಿನೆಂಟ್ ಜಾನ್ಸನ್, ಲೆಫ್ಟಿನೆಂಟ್ ಕಾವೇರಪ್ಪ, ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಅತ್ತುಲ್ ಶಣೈ, ಲೆಫ್ಟಿನೆಂಟ್ ಗೋವಿಂದರಾಜ್, ಸುಬೇದಾರ್ ಮೇಜರ್ ಮಲ್ಲಿಕಾರ್ಜುನ, ಬಿ.ಇನ್ನಿತರ ಅಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಕಾರ್ಯವು ಯಶಸ್ವಿಯಾಗಿ ನಡೆಯಿತು.
ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವ ಎನ್.ಸಿ.ಸಿ ಕೆಡೆಟ್‍ಗಳಿಗೆ ದೇಶ ರಕ್ಷಣಾ ಪಡೆಯಲ್ಲಿ ಕಮಿಷನರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಲಿಖಿತ ಪರೀಕ್ಷಾ ರಹಿತ ನೇರ ನೇಮಕಾತಿಯನ್ನು ಹೊಂದಲು ಅರ್ಹತೆಯನ್ನು ಪಡೆಯುವರು. ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ಹಾಗೂ ಸರಕಾರಿ ಉದ್ಯೋಗದಲ್ಲಿ ಇವರಿಗೆ ಮೀಸಲಾತಿ ಲಭಿಸುತ್ತದೆ ಎಂದು ಎನ್‍ಸಿಸಿ ಅಧಿಕಾರಿಗಳು ಮಾಹಿತಿ ನೀಡಿದರು.