ಮಡಿಕೇರಿ ಮಾ.6 : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಮಡಿಕೇರಿ ಅಂಚೆ ಕಛೇರಿಯ ಸಹಕಾರದೊಂದಿಗೆ ಕಾವೇರಿ ಕ್ಷೇತ್ರದ ತೀರ್ಥ ಮತ್ತು ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಆನ್ ಲೈನ್ ಸೇವೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಇಂದು ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ತಲಕಾವೇರಿಯ 100 ಎಂಎಲ್ ತೀರ್ಥ, ತ್ರಿವೇಣಿ ಸಂಗಮ ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲದ ಪಂಚಕಜ್ಜಾಯ, ಕುಂಕುಮ, ಗಂಧವನ್ನು ಒಳಗೊಂಡ ಪ್ರಸಾದದ ಡಬ್ಬಿಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಆಸಕ್ತಿ ಇರುವವರು www.indiapost.com ವೆಬ್ ಸೈಟ್‍ಗೆ ಲಾಗ್ ಇನ್ ಆಗಿ, 300 ರೂ. ಪಾವತಿಸಿ ಪವಿತ್ರ ಕಾವೇರಿ ಕ್ಷೇತ್ರದ ಪ್ರಸಾದಕ್ಕೆ ಬೇಡಿಕೆಯನ್ನು ಸಲ್ಲಿಸಬಹುದು, ಈ ಆನ್ ಲೈನ್ ಬೇಡಿಕೆಗೆ ಅನುಗುಣವಾಗಿ ಅಂಚೆ ಮೂಲಕ ಪ್ರಸಾದವನ್ನು ಸಂಬಂಧಿಸಿದವರಿಗೆ ತಲುಪಿಸಲಾಗುತ್ತದೆ.
::: ದೇಶವ್ಯಾಪಿ ಲಭ್ಯ :::
ಮಡಿಕೇರಿ ಅಂಚೆ ಕಚೇರಿಯ ಸೂಪರಿಂಟೆಂಡೆ0ಟ್ ರಮೇಶ್ ಬಾಬು, ವೆಬ್ ಸೈಟ್ ಮೂಲಕ ಬರುವ ಬೇಡಿಕೆಗೆ ಅನುಗುಣವಾಗಿ ಪ್ರಸಾದವನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಭಾರತದ ಒಳಗಿನ ಯಾವುದೇ ಪ್ರದೇಶಕ್ಕೆ ಪ್ರಸಾದವನ್ನು ತಲುಪಿಸಲಾಗುತ್ತದೆ. ಹೊರ ದೇಶಗಳಿಂದ ಬೇಡಿಕೆ ಬಂದರೆ ಅದನ್ನು ಪೂರೈಸಲು ಸಾಧ್ಯವಾಗಲಾರದೆಂದು ತಿಳಿಸಿದರು.
ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗದವರು ಅಥವಾ ದೂರದೂರುಗಳಲ್ಲಿ ನೆಲೆಸಿರುವವರು ಈ ವಿನೂತನ ಯೋಜನೆಯ ಮೂಲಕ ಕಾವೇರಿ ಕ್ಷೇತ್ರದ ತೀರ್ಥ ಮತ್ತು ಪ್ರಸಾದವನ್ನು ಸ್ವೀಕರಿಸಬಹುದು.
ಪ್ರಸಾದ ಸೇವೆಯ ಉದ್ಘಾಟನೆಯ ಸಂದರ್ಭ ಎಡಿಸಿ ಡಾ.ನಂಜುಂಡೇಗೌಡ ಹಾಗೂ ಅಂಚೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.









