ಮಡಿಕೇರಿ ಮಾ.23 : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 6 ನೇ ವರ್ಷದ ಗೌಡ ಕುಟುಂಬಗಳ ನಡುವಣ ‘ಫುಟ್ಬಾಲ್ ಪಂದ್ಯಾವಳಿ’ ಮತ್ತು ಮರಗೋಡು ವ್ಯಾಪ್ತಿಯ ಗ್ರಾಮಗಳಿಗೆ ಸೀಮಿತವಾಗಿ ವಿವಿಧ ಜನಾಂಗಗಳಿಗೆ ‘ ಯೂನಿಟಿ ಕಪ್ ಫುಟ್ಬಾಲ್’ ಪಂದ್ಯಾವಳಿ ಮೇ6 ರಿಂದ 13ರವರೆಗೆ ನಡೆಯಲಿದೆ.
ಸುದ್ದಿ ಗೋಷ್ಠಿಯಲ್ಲಿ ಗೌಡ ಫುಟ್ಬಾಲ್ ಅಕಾಡೆಮಿ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿ, ಗೌಡ ಸಮುದಾಯಗಳ ನಡುವಿನ 7+3 ಆಟಗಾರರ ಫುಟ್ಬಾಲ್ ಪಂದ್ಯಾವಳಿಯಲ್ಲಿ 80 ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು 2 ಸಾವಿರ ರೂ. ಮೈದಾನ ಶುಲ್ಕದೊಂದಿಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದರು.
ಪಂದ್ಯಾವಳಿ ವಿಜೇತ ತಂಡಕ್ಕೆ 60 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 40 ಸಾವಿರ ರೂ. ಮತ್ತು ಟ್ರೋಫಿ, ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 10 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆಂದು ಮಾಹಿತಿ ನೀಡಿದರು.
‘ಯೂನಿಟಿ ಕಪ್ ಫುಟ್ಬಾಲ್’- ಮರಗೋಡು, ಕಟ್ಟೆಮಾಡು, ಹೊಸ್ಕೇರಿ ಮತ್ತು ಅರೆಕಾಡು ಗ್ರಾಮ ವ್ಯಾಪ್ತಿಗೆ ಸೀಮಿತವಾಗಿ ‘ಯೂನಿಟಿ ಕಪ್ ಫುಟ್ಬಾಲ್’ ಆಯೋಜಿಸಲಾಗಿದೆ. ಇದರಲ್ಲಿ ಈ ಗ್ರಾಮ ವ್ಯಾಪ್ತಿಯ ಗೌಡ, ಕೊಡವ, ಮಲೆಯಾಳಿ, ಐರಿ , ಮೊಗೇರ , ಕುರುಬ ಹೀಗೆ ವಿವಿಧ ಸಮುದಾಯದ ಒಂದೊಂದು ತಂಡಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪಂದ್ಯಾವಳಿಯಲ್ಲಿ 10 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಮಾಹಿತಿಯನ್ನಿತ್ತರು.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು 1 ಸಾವಿರ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಪಂದ್ಯಾವಳಿ ವಿಜೇತ ತಂಡಕ್ಕೆ 25 ಸಾವಿರ ರೂ. ಮತ್ತು ಟ್ರೋಫಿ, ದ್ವಿತೀಯ 15 ಸಾವಿರ ರೂ. ಮತ್ತು ಟ್ರೋಫಿಯನ್ನು ನೀಡಲಾಗುತ್ತದೆಂದು ತಿಳಿಸಿದರು.
ಹೆಸರು ನೋಂದಣಿ- ಈ ಎರಡು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳ ಹೆಸರು ನೋಂದಾವಣೆಗೆ ಏ.31 ಕಡೆಯ ದಿನಾಂಕವಾಗಿದೆ. ನೋಂದಣಿಗೆ ಕೊಂಪುಳಿರ ಪುನೀತ್ ಮೊ.9483253769, ರೋಷನ್ ಬೊಳ್ಳೂರು ಮೊ.9611502270, ಕಾಂಗೀರ ಮೋನಿಷ್ ಮೊ.9008538932 ಅವರನ್ನು ಸಂಪರ್ಕಿಸಬಹುದೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷರಾದ ಬಡುವಂಡ್ರ ದುಷ್ಯಂತ್, ಸ್ಥಾಪಕ ಅಧ್ಯಕ್ಷರಾದ ಕಟ್ಟೆಮನೆ ರಾಕೇಶ್, ಕಾರ್ಯದರ್ಶಿ ಇಟ್ಟಣಿಕೆ ನವನೀತ್, ಸಹ ಕಾರ್ಯದರ್ಶಿ ಕೊಂಪುಳಿರ ಪುನೀತ್, ಖಜಾಂಚಿ ಬಡುವಂಡ್ರ ಸುಜಯ್ ಉಪಸ್ಥಿತರಿದ್ದರು.