ಮಡಿಕೇರಿ ಮಾ.27 : ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮದ ಶ್ರೀ ನಂಜುಂಡೇಶ್ವರ, ಶ್ರೀ ಬಸವೇಶ್ವರ, ಶ್ರೀ ಕನ್ನಂಬಾಡಿ ಅಮ್ಮ ಮತ್ತು ಆದಿಶಕ್ತಿ ದೇವಿರಮ್ಮ ಹಾಗೂ ಶ್ರೀ ವೀರಭದ್ರ ಸ್ವಾಮಿಯ ವಾರ್ಷಿಕೋತ್ಸವವು ಏ.3 ಮತ್ತು 4 ರಂದು ಜರುಗಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮದರ್ಶಿ ಡಾ.ಶ್ರೀ ವೀರೇಂದ್ರ ಹೆಗ್ಗಡೆ ಅವರ ಕೃಪಾರ್ಶಿವಾದದೊಂದಿಗೆ, ಅರಸಿಕೆರೆ ಹಾರ್ನಹಳ್ಳಿ ಸುಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ, ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ, ಪಿರಿಯಾಪಟ್ಟಣದ ದಿಂಡುಗಾಡು ಬಸವಜ್ಯೋತಿ ಮಠದ ಪೀಠಾಧ್ಯಕ್ಷ ಶ್ರೀ ಅಪ್ಪಾಜಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಎರಡು ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಲಿದೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಎಸ್.ರತೀಶ್ ತಿಳಿಸಿದ್ದಾರೆ.
ಏ.3 ರಂದು ಸಂಜೆ 5 ಗಂಟೆಗೆ ಉತ್ಸವ ಆರಂಭಗೊಳ್ಳಲಿದ್ದು, ಪಿರಿಯಾಪಟ್ಟಣದ ದಿಂಡುಗಾಡು ಬಸವಜ್ಯೋತಿ ಮಠದ ಪೀಠಾಧ್ಯಕ್ಷ ಶ್ರೀ ಅಪ್ಪಾಜಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಕನ್ನಂಬಾಡಿ ಅಮ್ಮದೇವಿಯ ಮುಖಸಿರಿಯನ್ನು ವಾದ್ಯಗೋಷ್ಠಿಯೊಂದಿಗೆ ಸಮಿತಿ ಅಧ್ಯಕ್ಷ ಎನ್.ಕೆ.ಮೋಹನ್‍ಕುಮಾರ್ ಅವರ ಮನೆಯಿಂದ ದೇವಾಲಯಕ್ಕೆ ತರಲಾಗುವುದು.
ಸಂಜೆ 7 ಗಂಟೆಗೆ ಶ್ರೀ ದೇವರುಗಳಿಗೆ ಅಲಂಕಾರ, ಗಂಗೆ ಗಣಪತಿ, ಆಗ್ರೋಧಕ ಪೂಜೆ, ಸ್ವಸ್ಥಿವಾಚನಂ, ಬಲಿಪೂಜೆ ಜರುಗಲಿದೆ. ರಾತ್ರಿ 8.30ಕ್ಕೆ ಮಹಾಮಂಗಳಾರತಿ ಜರುಗಲಿದ್ದು, 9 ಗಂಟೆಗೆ ಮಹಾಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ನಂತರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೈರಳಿ ನಾಟ್ಯಾಲಯ ಹಾಗೂ ಸ್ಕೂಲ್ ಆಫ್ ಕ್ಲಾಸಿಕ್ ಡ್ಯಾನ್ಸ್ ನೃತ್ಯ ಸಂಸ್ಥೆಯಿಂದ ಸಾಂಸ್ಕøತಿ ಕಾರ್ಯಕ್ರಮ ನಡೆಯಲಿದ್ದು, ಮಧ್ಯರಾತ್ರಿ 12 ಗಂಟೆಯಿಂದ ದೇವರುಗಳ ಉತ್ಸವ ಪಲ್ಲಕ್ಕಿ ಅಲಂಕಾರ ನಡೆಯಲಿದೆ.
ಏ.4 ರಂದು ಮುಂಜಾನೆ 4 ಗಂಟೆಗೆ ಪಿರಿಯಾಪಟ್ಟಣದ ದಿಂಡುಗಾಡು ಬಸವಜ್ಯೋತಿ ಮಠದ ಪೀಠಾಧ್ಯಕ್ಷ ಅಪ್ಪಾಜಿ ಸ್ವಾಮಿಜಿಗಳಿಂದ ಕೆಂಡಕೊಂಡದ ಪೂಜೆ ಹಾಗೂ ಮಹಾರುದ್ರಾಭಿಷೇಕ ನೆರವೇರಲಿದೆ.
ಬೆಳಿಗ್ಗೆ 8 ಗಂಟೆಗೆ ವಾದ್ಯಮೇಳ, ಅಲಂಕೃತ ದೇವರುಗಳ ಪಲ್ಲಕ್ಕಿಯೊಂದಿಗೆ ಗಂಗಾ ಸ್ನಾನಕ್ಕೆ ಹೊರಡುವುದು, 8.30ಕ್ಕೆ ಶ್ರೀ ದೇವರುಗಳಿಗೆ ದುಬಾರೆ ಕಾವೇರಿ ನದಿ ತೀರದಲ್ಲಿ ಗಂಗಾಸ್ನಾನ ಹಾಗೂ ಗಂಗಾಪೂಜೆ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರರು, ಮಂಡ್ಯ ನಾಗಮಂಗಲದ ಲಿಂಗದವೀರರು ಮಹದೇವಪ್ಪನವರ ಮಕ್ಕಳಿಂದ ಶ್ರೀ ವೀರಭದ್ರ ನೃತ್ಯ ಮತ್ತು ಶ್ರೀ ಬಸವೇಶ್ವರ ದೇವರು ಹಾಗೂ ಕನ್ನಂಬಾಡಿ ಅಮ್ಮ ದೇವರುಗಳ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ.
ಬೆಳಿಗ್ಗೆ 11.30ಕ್ಕೆ ಅರಸಿಕೆರೆ ಹಾರ್ನಹಳ್ಳಿ ಸುಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ, ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ, ಪಿರಿಯಾಪಟ್ಟಣದ ದಿಂಡುಗಾಡು ಬಸವಜ್ಯೋತಿ ಮಠದ ಪೀಠಾಧ್ಯಕ್ಷ ಶ್ರೀ ಅಪ್ಪಾಜಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕೆಂಡ ಕೊಂಡದ ಅಗ್ನಿ ಪೂಜೆ ನೆರವೇರಲಿದೆ.
ಮಧ್ಯಾಹ್ನ 12 ಗಂಟೆಗೆ ಕೊಂಡ ಹಾಯುವುದು, 12.30ಕ್ಕೆ ಸ್ವಾಮೀಜಿಗಳಿಂದ ಆಶೀರ್ವಚನ, ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, 2 ಗಂಟೆಗೆ ಲೋಕಕಲ್ಯಾಣಾರ್ಥ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಕಾವೇರಿ ನದಿ ತೀರದಲ್ಲಿ ಉತ್ತರ ಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ರತೀಶ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ 97418 17086 ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.









