ಪರಶುರಾಮ ಥೀಮ್ ಪಾರ್ಕ್ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನಲ್ಲಿ ಉಮಿಕ್ಕಲ್ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಒಂದು ಪ್ರವಾಸೀ ತಾಣವಾಗಿದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಮೂರ್ತಿಯನ್ನು ಕಂಚಿನಿಂದ ನಿರ್ಮಿಸಿ, ಬೆಟ್ಟದ ಮೇಲೆ ಇರುವ ಕಟ್ಟಡದ ಮೇಲ್ಭಾಗದಲ್ಲಿ ನಿಲ್ಲಿಸಲಾಗಿದೆ. ಈ ಕಂಚಿನ ಮೂರ್ತಿ 33 ಅಡಿ ಎತ್ತರವಿದ್ದು, ಮೂರ್ತಿಯ ಬಲದ ಕೈಯಲ್ಲಿ ಕೊಡಲಿ, ಎಡಗೈಯಲ್ಲಿ ಬಿಲ್ಲನ್ನು ಹಿಡಿದು ಎಡಗಾಲನ್ನು ಎತ್ತರಿಸಿ ಇಟ್ಟಿರುವಂತೆ ನಿರ್ಮಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿದ್ದು, ಪಾರ್ಕ್‌ಗೆ ಸಂಬಂಧಿಸಿದ ಇತರ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಸದ್ಯಕ್ಕೆ ಭಜನಾ ಮಂದಿರ, ಆಧುನಿಕ ಆಡಿಯೋ- ವಿಶುವಲ್ ಮ್ಯೂಸಿಯಂ, 500 ಆಸನಗಳ ಆಂಫಿಥಿಯೇಟರ್,450 ಅಡಿ ಬೆಟ್ಟದ ಮೇಲಿರುವ ವ್ಯೂಪಾಯಿಂಟ್, ಭಿತ್ತಿಚಿತ್ರಗಳ ಮೂಲಕ ಪರಶುರಾಮನ ಬಗ್ಗೆ ಬಿಡಿಸಲಾದ ಭಿತ್ತಿಚಿತ್ರಗಳನ್ನು ಜೋಡಿಸಿರುವ ಹಜಾರ ಮತ್ತು ರೆಸ್ಟೋರೆಂಟ್ ಹೊಂದಿರುವ ಥೀಂ ಪಾರ್ಕ್ ಸಾಂಸ್ಕೃತಿಕ ಪರಂಪರೆಗೆ ಸೇರ್ಪಡೆಯಾಗಿದೆ. ಗುಡ್ಡದ ಮೇಲೆ ಸ್ಥಾಪಿಸಲಾಗಿರುವ ಪರಶುರಾಮನ ಪ್ರತಿಮೆ ಈಗಾಗಲೇ ದೇಶದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದಿಂದ ಉದ್ಯಾನವನವನ್ನು ಸ್ಥಾಪಿಸಲಾಗಿದೆ.
ಪರಶುರಾಮ
ಪರಶುರಾಮ ತುಳುನಾಡನ್ನೂ ಒಳಗೊಂಡ ಕರಾವಳಿ ತೀರದ ಸೃಷ್ಟಿಕರ್ತ. ದಂಡಾಕಾರಣ್ಯದ ಪಶ್ಚಿಮಕ್ಕೆ ಇರುವ ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಮರು ಸೃಷ್ಟಿಸಿದ್ದು ಎಂಬುದು ಪುರಾಣ ಪ್ರತೀತಿ. ಸುಮಾರು ೫೦೦೦ ವರ್ಷಗಳಿಗಿಂತಲೂ ಹಿಂದೆ ಭಾರತದ ಪುಣ್ಯ ಭೂಮಿಯಲ್ಲಿ ಜೀವಿಸಿದ್ದ ಪರಶುರಾಮ, ವಿಷ್ಣುವಿನ ಆರನೆಯ ಅವತಾರ ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ಇವರು ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು.ಇವರು ತಮ್ಮ ತಾಯಿಗಾಗಿ ಪರಶುಘಡದಲ್ಲಿ(ಸವದತ್ತಿ) ತಪಸ್ಸು ಮಾಡಿ ವಿಷ್ಣುವಿನಿಂದ ಪರುಶು(ಕೊಡಲಿ) ಪಡೆದಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು.