ಸೋಮವಾರಪೇಟೆ ಏ.6 : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾದಾನಕ್ಕಾಗಿ ಇಂತಹ ಶೈಕ್ಷಣಿಕ ಸಂಸ್ಥೆಗಳನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಬಸವ ಪಟ್ಟಣದ ತೋಟಂದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಿಸಿದರು.
ಯಡೂರು ಗ್ರಾಮದ ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಹಾಗೂ ಕಾಲೇಜು ವತಿಯಿಂದ ನಡೆದ ಸರಸ್ವತಿ ಪೂಜೆ ಹಾಗೂ ಕಾಲೇಜು ಸಂಸ್ಥಾಪಕರಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಲು ಅನೇಕ ದಾನಿಗಳು ತನು, ಮನ, ಧನವನ್ನು ವಿನಿಯೋಗಿಸಿದ್ದಾರೆ. ಅಂತಹವರನ್ನು ಗೌರವಿಸುವುದು ಶ್ಲಾಘನೀಯ ಎಂದು ಹೇಳಿದರು.
ವಿದ್ಯಾರ್ಥಿಗಳು ರಾಷ್ಟ್ರದ ಭವ್ಯ ಪ್ರಜೆಗಳು. ಚುನಾವಣೆ ಘೋಷಣೆಯಾಗಿದೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಯುವಸಮುದಾಯ ಮತದಾನ ಮಾಢಬೇಕು. ಅದರಲ್ಲೂ ಯೋಗ್ಯ ವ್ಯಕ್ತಿಗೆ ಮತದಾನ ಮಾಡಿ ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಸಂಸ್ಥಾಪಕ ಸಮಿತಿ ಕಾರ್ಯದರ್ಶಿ ಎ.ಪಿ.ಶಂಕರಪ್ಪ ಹಾಗೂ ಶಾರದಮ್ಮ ದಂಪತಿಗಳು, ಸಂಸ್ಥಾಪಕ ಅಧ್ಯಕ್ಷ ದಿವಂಗತ ಬಿ.ಟಿ.ಚೆನ್ನಯ್ಯ ಪರವಾಗಿ ಅವರ ಮೊಮ್ಮಗ ರೋಹಿತ್ ರಾಮದೇವ್ ಅವರನ್ನು ಕೃತಜ್ಞತಾ ಪೂರ್ವಕವಾಗಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಧನಲಕ್ಷ್ಮಿ ವಹಿಸಿದ್ದರು. ಜಯಂತ್ತ್ಯೋತ್ಸವ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್, ಕಾಲೇಜು ಹಿಂದಿನ ಆಡಳಿತ ಮಂಡಳಿ ಸದಸ್ಯರಾದ ಎ.ಪಿ.ಶಿವರುದ್ರಪ್ಪ, ಪುಪ್ಪಯ್ಯ, ಯಡೂರು ಗ್ರಾಮ ಸಮಿತಿ ಅಧ್ಯಕ್ಷ ವೈ. ಈ.ವಿಜಯ್ ಇದ್ದರು.