ಮಡಿಕೇರಿ ಏ.6 : ಜನಾಂಗದ ಮೂಲವನ್ನು ಅರಿತಾಗ ಮಾತ್ರ ನಮ್ಮ ಸಂಸ್ಕೃತಿ, ಭಾಷೆ, ಆಚಾರ, ವಿಚಾರ ಪದ್ದತಿ ಉಳಿಯುತ್ತದೆ ಎಂದು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹೇಳಿದರು.
ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ ಕಥೆ-ನಿರ್ದೇಶನದ ಕೊಡವ ಚಲನಚಿತ್ರ “ಬೇರ್” (The Root) ಚಿತ್ರದ ಮುಹೂರ್ತ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ ಮೊಣ್ಣಂಡ ಶೋಭಾ ಸುಬ್ಬಯ್ಯ, ಕೊಡವರು ತಮ್ಮ ಸಂಸ್ಕೃತಿಯನ್ನು ಯಾವುದಾದರೊಂದು ರೂಪದಲ್ಲಿ ಉಳಿಸಿ ಬೆಳೆಸುವ ಪ್ರಯತ್ನ ಮಾಡಿ ಮತ್ತೊಬ್ಬರಿಗೆ ಪ್ರೇರಣೆ ನೀಡಬೇಕು ಎಂದರು.
ಕೊಡವ ಭಾಷೆಯಲ್ಲಿ ಪ್ರಸ್ತುತ ಹಲವು ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಕೊಡವ ಭಾಷೆಯ ಚಲನಚಿತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಲ್ಲದೆ ಕೊಡವ ಸಿನಿಮಾಗಳು ಬಂದ ನಂತರ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿತ್ರದ ಕಥೆ-ನಿರ್ದೇಶಕರಾದ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಕೊಡವ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವರ್ಷಕ್ಕೊಂದು ಕೊಡವ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಚಿತ್ರತಂಡಕ್ಕೆ ಕೊಡವಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಸಿನಿಮಾ ನಿರ್ಮಿಸುವುದಾಗಿ ತಿಳಿಸಿದರು.
ಮಡಿಕೇರಿ ಸುತ್ತ ಮುತ್ತ ಸೇರಿದಂತೆ ಕೊಡಗಿನ ವಿವಿಧೆಡೆ ಚಿತ್ರೀಕರಣ ನಡೆಯಲಿದ್ದು, ಚಿತ್ರದ ಪೋಸ್ಟರ್‌ನಲ್ಲಿ ಮೊದಲ ಬಾರಿಗೆ ಕೊಡವ ಲಿಪಿಯನ್ನು ಬಳಕೆ ಮಾಡಿರುವುದು ವಿಶೇಷವಾಗಿದೆ ಎಂದರು.
ಪೊಮ್ಮಾಲೆ ಕೊಡಗ್, ಕಂದೀಲು ಸೇರಿದಂತೆ ಅನೇಕ ಕನ್ನಡ, ಕೊಡವ ಚಿತ್ರದ ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿರುವ ಕೊಟ್ಟುಕತ್ತೀರಾ ಯಶೋಧ ಪ್ರಕಾಶ್ ರವರು ಕ್ಯಾಮರಕ್ಕೆ ಪೂಜೆ ಸಲ್ಲಿಸಿ, ಚಿತ್ರದ ಯಶಸ್ಸಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಟ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಮಂಡಿರ ಬೋಪಯ್ಯ ಹಾಜರಿದ್ದರು.
ಚಿತ್ರತಂಡ :: ಕಥೆ-ನಿರ್ದೇಶನ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ, ಚಿತ್ರಕಥೆ ದನಂಜಯ್ ಗಾರ್ಗಿ, ಅಸೋಸಿಯೆಟ್ ಡೆರೈಕ್ಟರ್ ಈರಮಂಡ ಹರಿಣಿ ವಿಜಯ್ ಹಾಗೂ ಇತಿಹಾಸ್ ಶಂಕರ್, ಪ್ರೊಡಕ್ಷನ್ ಕಂಟ್ರೋಲರ್ ಈರಮಂಡ ವಿಜಯ್ ಉತ್ತಯ್ಯ, ಕಾರ್ಯಾಕಾರಿ ನಿರ್ಮಾಪಕ ಬೊಳ್ಳಜಿರ ಬಿ.ಅಯ್ಯಪ್ಪ, ಛಾಯಾಗ್ರಹಣ ಶಿವಕುಮಾರ್ ಅಂಬಲಿ, ಸಂಕಲನಕಾರರಾಗಿ ಪ್ರದೀಪ್ ಆರ್ಯನ್, ಡಿಐ – ಕುಟ್ಟಂಡ ನಿಖಿಲ್ ಕಾರ್ಯಪ್ಪ, ಸಬ್ ಟೈಟಲ್ – ಚೋಕಂಡ ದಿನು ನಂಜಪ್ಪ ಕಾರ್ಯನಿರ್ವಹಿಸಲಿದ್ದು, ವಿಠಲ್ ರಂಗದೋಳ್ ಸಂಗೀತ ನೀಡಲಿದ್ದಾರೆ.
::: ಕಲಾವಿದರು ::: ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ, ಮಂಡೀರ ಪದ್ಮ ಬೋಪಯ್ಯ, ವಾಂಚೀರ ವಿಠಲ್ ನಾಣಯ್ಯ, ಮೊಣ್ಣಂಡ ನೇಹಾ ಮೋಟಯ್ಯ, ಗುಮ್ಮಟಿರ ಕಿಶು ಉತ್ತಪ್ಪ, ಉಳುವಂಗಡ ಅಮಿತ್ ಬೋಪಣ್ಣ, ಪುಲಿಯಂಡ ಯಾಮಿನಿ, ಕೋಲೆಯಂಡ ನಿಶಾ ಮೋಹನ್, ತೋರೇರ ಲಾವಣ್ಯಲೋಹಿತ್, ಹಾಗೂ ಬಾಲ ಕಲಾವಿದರಾಗಿ ಕೊಟ್ಟುಕತ್ತೀರಾ ತೇಜಲ್ ಕಾರ್ಯಪ್ಪ, ಕೊಟ್ಟುಕತ್ತೀರಾ ತನಮ್ ಕಾರ್ಯಪ್ಪ ಹಾಗೂ ತೋರೆರ ಭುವಿ ಪೂವಮ್ಮ ನಟಿಸಲಿದ್ದಾರೆ.