ಮಡಿಕೇರಿ ಏ.6 : ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ‘ಅಪ್ಪಚೆಟ್ಟೋಳಂಡ ಹಾಕಿ ಉತ್ಸವ’ ಕೊನೆಯ ಘಟ್ಟವನ್ನು ಪ್ರವೇಶಿಸುತ್ತಿದ್ದು, ಪಂದ್ಯಾವಳಿಯ ಸೆಮಿ ಫೈನಲ್ಸ್ ಏ.7 (ಇಂದು) ಮತ್ತು ಅಂತಿಮ ಪಂದ್ಯ ಏ.9 ರಂದು ನಡೆಯಲಿದೆಯೆಂದು ಪಂದ್ಯಾವಳಿ ಆಯೋಜನಾ ಸಮಿತಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಇಪ್ಪತ್ತು ದಿನಗಳಿಂದ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ನೋಂದಾಯಿಸಿಕೊಂಡ 336 ತಂಡಗಳ ಪೈಕಿ 329 ತಂಡಗಳು ಪಾಲ್ಗೊಂಡಿದ್ದು, ವಿವಿಧ ಕುಟುಂಬಗಳ 5 ಸಾವಿರ ಆಟಗಾರರು ಪಾಲ್ಗೊಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು 957 ಗೋಲುಗಳು ವಿವಿಧ ಪಂದ್ಯಗಳಲ್ಲಿ ದಾಖಲಾಗಿದೆ. 49 ಪಂದ್ಯಗಳಲ್ಲಿ ವಿಜೇತ ತಂಡಗಳನ್ನು ಟೈಬ್ರೇಕರ್ ಮೂಲಕ ನಿರ್ಧರಿಸಲಾಗಿದೆ. ಒರಟಾಟಕ್ಕಾಗಿ 67 ಹಸಿರು, 11 ಹಳದಿ ಕಾರ್ಡ್‍ಗಳನ್ನು ತೋರಿಸಲಾಗಿದೆ. ತಾಂತ್ರಿಕ ತಂಡದಲ್ಲಿ 27 ಮಂದಿ ಕಾರ್ಯನಿರ್ವಹಿಸುತ್ತಿರುವುದಾಗಿ ಮಾಹಿತಿಯನ್ನಿತ್ತರು.
ಯುವಕರನ್ನು ನಾಚಿಸಿದ ವೃದ್ಧರು- ಪಂದ್ಯಾವಳಿಯಲ್ಲಿ ನಾಪನೆರವಂಡ ಕುಟುಂಬ ತಂಡದಲ್ಲಿ 87ರ ಪ್ರಾಯದ ಪೊನ್ನಪ್ಪ, ಚೀಯಕಪೂವಂಡ ತಂಡದಲ್ಲಿ 84 ರ ಪ್ರಾಯದ ಉತ್ತಪ್ಪ ಅವರು ಪಾಲ್ಗೊಂಡು ಯುವಕರನ್ನು ನಾಚಿಸುವಂತೆ ಆಟವಾಡಿ ಗಮನ ಸೆಳೆದಿದ್ದಾರೆಂದು ಪಂದ್ಯಾವಳಿಯಲ್ಲಿ ಕಂಡು ಬಂದ ಕುತೂಹಲಕಾರಿ ಅಂಶಗಳನ್ನು ತೆರೆದಿಟ್ಟರು.
ಪಂದ್ಯಾವಳಿಯಲ್ಲಿ 3 ರ ಪ್ರಾಯದ ಅಚ್ಚಾಂಡಿರ ತನು ತಿಮ್ಮಯ್ಯ ಪಾಲ್ಗೊಂಡು ಕುತೂಹಲ ಮೂಡಿಸಿದರೆ, ಕೇತಿರ ಕುಟುಂಬ ತಂಡ ಪ್ರಥಮ ಬಾರಿಗೆ ಪಂದ್ಯಾಳಿಯಲ್ಲಿ ಪಾಲ್ಗೊಂಡುದಲ್ಲದೆ, ಈ ತಂಡದ ಅರ್ಧದಷ್ಟು ಅಂದರೆ ಐವರು ಮಹಿಳಾ ಆಟಗಾರರು ಮೈದಾನಕ್ಕಿಳಿದು ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದನ್ನು ಮನು ಮುತ್ತಪ್ಪ ತಿಳಿಸಿ, ಬಾಚಿಮಂಡ ತಂಡದಲ್ಲಿ ತಂದೆ, ತಾಯಿ, ಮಗ, ಮಗನ ಪತ್ನಿ ಹೀಗೆ ಒಂದೇ ಕುಟುಂಬದ ನಾಲ್ವರು ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾಗಿ ತಿಳಿಸಿದರು.
ಇಂದು ಸೆಮಿಫೈನಲ್- ಏ.7 ರಂದು ಪಂದ್ಯಾವಳಿಯ ಮೊದಲ ಸೆಮಿಫೈನಲ್‍ನ್ನು ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಂಪಿಯನ್ ಮನೆಯಪಂಡ ಸೋಮಯ್ಯ ಉದ್ಘಾಟಿಸಲಿಸಲಿದ್ದಾರೆ. ದ್ವಿತೀಯ ಸೆಮಿಫೈನಲ್ ಪಂದ್ಯವನ್ನು ಅಂತರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಅಚ್ಚಕಾಳಿರ ಪಳಂಗಪ್ಪ ಮತ್ತು ಅಯ್ಯುಡ ವೇಣು ಉತ್ತಪ್ಪ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ಪಾಲೆಕಂಡ ಬೋಪಯ್ಯ, ಪಾ¯ಕಂಡ ಬೆಳ್ಯಪ್ಪ, ಮಾರಮಾಡ ಮಾಚಮ್ಮ ಅವರನ್ನು ಅವರ ಕ್ರೀಡಾ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಗುವುದೆಂದರು.
ಅಂತಿಮ ಪಂದ್ಯ- ಅಂತಿಮ ಪಂದ್ಯ ಏ.9 ರಂದು ನಡೆಯಲಿದ್ದು, ಪಂದ್ಯವನ್ನು ಹಾಕಿ ಉತ್ಸವದ ಸ್ಥಾಪಕ ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಪಾಂಡಂಡ ಲೀಲಾ ಕುಟ್ಟಪ್ಪ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಏರ್ ಮಾರ್ಷಲ್ ಬಲ್ಟಿಕಾಳಂಡ ಯು.ಚೆಂಗಪ್ಪ, ಗಾರ್ಡನ್ ಸಿಟಿ ಯೂನಿವರ್ಸಿಟಿಯ ಕುಲಪತಿ ಡಾ. ಜೋಸೆಫ್ ವಿ.ಜಿ., ಕೈಗ್ ಸಂಸ್ಥೆಯ ಕುಟ್ಟಂಡ ಸುದಿನ್ ಮಂದಣ್ಣ, ಭಾರತ ಹಾಕಿ ತಂಡದ ಮಾಜಿ ನಾಯಕರುಗಳಾದ ಜಫರ್ ಇಕ್ಬಾಲ್, ಧನರಾಜ್ ಪಿಳ್ಳೆ, ಒಲಂಪಿಯನ್ ಅಂಜಪರವಂಡ ಸುಬ್ಬಯ್ಯ, ಒಲಂಪಿಯನ್ ಚೆಪ್ಪುಡಿರ ಎಸ್ ಪೂಣಚ್ಚ, ಒಲಂಪಿಯನ್ ಎಸ್.ವಿ. ಸುನಿಲ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಬಹುಮಾನ- ಪಂದ್ಯಾವಳಿ ವಿಜೇತ ತಂಡಕ್ಕೆ 3 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ 2 ಲಕ್ಷ ರೂ. ಮತ್ತು ಟ್ರೋಫಿ, ತೃತೀಯ 1.50 ಲಕ್ಷ ನಗದು ಮತ್ತು ಟ್ರೋಫಿ, ನಾಲ್ಕನೇ 50 ಸಾವಿರ ರೂ. ಮತ್ತು ಟ್ರೋಫಿ ನೀಡಲಾಗುವುದೆಂದರು. ಪಂದ್ಯಾವಳಿ ಪುರುಷೋತ್ತಮರಿಗೆ 1 ಲಕ್ಷ , ಅಂತಿಮ ಪಂದ್ಯ ಪುರುಷೋತ್ತಮರಿಗೆ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜನಾ ಸಮಿತಿಯ ಗೌರವ ಕಾರ್ಯದರ್ಶಿ ಮಿಥುನ್ ಮಾಚಯ್ಯ, ಸದಸ್ಯರುಗಳಾದ ಮನು ಮಾದಪ್ಪ, ಸೋಮಣ್ಣ, ರಾಧಿಕಾ ಮಾದಪ್ಪ, ಶಶಿ ಜನತ್ ಕುಮಾರ್ ಉಪಸ್ಥಿತರಿದ್ದರು.