ಮಡಿಕೇರಿ ಏ.13 : ಕೊಡಗು ಐರಿ ಸಮುದಾಯಗಳ ಮಧ್ಯೆ ನಡೆಯುವ ಒಂಭತ್ತನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಕಲಾವಿದ ಐಮಂಡ ರೂಪೇಶ್ ನಾಣಯ್ಯ ಲೋಗೋ ವಿನ್ಯಾಸ ಮಾಡಿದ್ದಾರೆ. ಐರಿ ಜನಾಂಗದ ಸಂಸ್ಕೃತಿಕ ಹೆಗ್ಗುರುತಾಗಿರುವ ಐನ್ ಮನೆಯನ್ನು ಮುಖ್ಯ ಥೀಂ ಆಗಿಟ್ಟುಕೊಂಡು ಲೋಗೋ ರಚಿಸಲಾಗಿದೆ. ಐರಿ ಜನಾಂಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಏಳು ಬಾರಿ ಚಾಂಪಿಯನ್ ಆಗಿದ್ದ ಬಲ್ಲಮಾವಟಿ ಐರೀರ ತಂಡದ ಹೊಡಿ ಬಡಿ ಆಟಗಾರ ಚಂಗಪ್ಪ ಲೋಗೋ ಬಿಡುಗಡೆ ಮಾಡಿದರು.
ಈ ಸಂದರ್ಭ ಐನ್ ಮನೆ ಟ್ರೋಫಿ ಕ್ರಿಕೆಟ್ ಆಯೋಜನಾ ಸಮಿತಿ ಕಾರ್ಯದರ್ಶಿ ಮುಲ್ಕೈರಿರ ರೋಷನ್ ಸುಬ್ಬಯ್ಯ, ಸದಸ್ಯರಾದ ಮುಲ್ಲೈರಿರ ಮೋಹನ್ ಗಣಪತಿ, ಐಮಣಿಯಂಡ ಕಿಶೋರ್ ಕಾವೇರಪ್ಪ, ಕರಕುಶಲಕರ್ಮಿ ಐನಂಗಡ ಉದಯ್, ಮುಲ್ಕೈರಿರ ಸುಬ್ಬಯ್ಯ, ಆಯಪಂಡ ದಿಲನ್ ದೇವಯ್ಯ, ಕುಂದೈರಿರ ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಐನ್ ಮನೆ ಟ್ರೋಫಿ -2023 : ಐನ್ ಮನೆ ಟ್ರೋಫಿ -2023 ಇದೇ ತಿಂಗಳ 22, 23 ರಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, 20 ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.
ಹೆಣ್ಣುಮಕ್ಕಳಿಗೂ ಪ್ರದರ್ಶನ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲಾಗಿದ್ದು, ಮಹಿಳೆಯರಿಗೆ ಹಗ್ಗ ಜಗ್ಗಾಟ ಹಾಗೂ ವಿವಿಧ ವಯೋಮಾನದ ಪುರುಷ ಹಾಗೂ ಸ್ರ್ತೀಯರಿಗೆ 100 ಮೀಟರ್ ಓಟ, ಪುಟ್ಟ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾಗಿ ಅತಿ ಹೆಚ್ಚು ಅಂಕಗಳಿಸುವ ಕುಟುಂಬಕ್ಕೆ ಆಕರ್ಷಕ ಐನ್ ಮನೆ ಮಾದರಿಯನ್ನು ಟ್ರೋಫಿಯನ್ನಾಗಿ ನೀಡಲಾಗುತ್ತದೆ ಎಂದು ಕ್ರಿಕೆಟ್ ಆಯೋಜನಾ ಸಮಿತಿ ಸಂಚಾಲಕ ಐಮಂಡ ಶಬರಿ ನಾಚಪ್ಪ ತಿಳಿಸಿದ್ದಾರೆ.
ಐನ್ ಮನೆ ಟ್ರೋಫಿ -2023 ಕ್ರೀಡಾಕೂಟವನ್ನು ಐರಿಮಕ್ಕಡ ಕೂಟ ಮತ್ತು ಐರಿ ಸಮಾಜ ಅರಮೇರಿ(ರಿ) ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ.