ನಾಪೋಕ್ಲು ಏ.14 : ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸಂಸ್ಥೆ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ, ಅಂಬೇಡ್ಕರ್ ಜನ್ಮದಿನಾಚರಣೆ ಮತ್ತು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಶಾಲೆಯ ಉಪಪ್ರಾಂಶುಪಾಲ ಎಂ.ಎಸ್ ಶಿವಣ್ಣ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಡಾ.ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಬೇಕೆಂದು ಸಲಹೆ ನೀಡಿದರು.
ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎ. ಹಾರಿಸ್ ಮಾತನಾಡಿ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಇಡೀ ವಿಶ್ವವೇ ನಮ್ಮ ದೇಶವನ್ನು ಗಮನಿಸುವಂತೆ ಮಾಡಿದೆ. ಅಲ್ಲದೇ ಎಲ್ಲರೂ ಸಮಾನತೆಯಿಂದ ಉನ್ನತ ಸ್ಥಾನಕ್ಕೆರಲು ಸಾಧ್ಯವಾಗಿದೆ ಎಂದರು.
ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆಗಳನ್ನು ಓದಿ ತಮ್ಮ ಜೀವನದಲ್ಲಿ ಅಳವಡಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಶ್ರಮಿಸಬೇಕೆಂದರು.
ಕಾರ್ಯಕ್ರಮಕ್ಕೂ ಮೊದಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿ ಅಂಬೇಡ್ಕರ್ ಜನ್ಮದಿನ ಆಚರಿಸಿದರು. ಬಳಿಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ನಾಪೋಕ್ಲು ಪಟ್ಟಣದ ಮುಖ್ಯ ಬೀದಿಯಲ್ಲಿ ಆಕರ್ಷಕ ಮೆರವಣಿಗೆಯ ಮೂಲಕ ಸಾರ್ವಜನಿಕರಿಗೆ ಮತದಾನದ ಕುರಿತು ಜನ ಜಾಗೃತಿ ಜಾಥಾ ನಡೆಸಲಾಯಿತು.
ನಂತರ ಬೇಸಿಗೆ ಶಿಬಿರದ ಅಂಗವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯ ಚಟುವಟಿಕೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಪಾಜೆ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ, ಕೋಶಾಧಿಕಾರಿ ಗಂಗಮ್ಮ, ಅಂಕುರ್ ಆಂಗ್ಲ ಮಾಧ್ಯಮ ಶಾಲೆಯ ಗೈಡ್ಸ್ ಮಾಸ್ಟರ್ ಮಹೇಶ್, ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಲೀಲಾವತಿ, ಶಿಕ್ಷಕಿ ಅಶ್ವಿನಿ, ಶಿಕ್ಷಕ ಬಂಡೆಪ್ಪ, ಶಿಕ್ಷಕ ಮಾದೇಶ್, ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ, ಅಂಕುರ್ ಆಂಗ್ಲ ಮಾಧ್ಯಮ ಶಾಲೆ, ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೇಟ್ಸ್ ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು