ಮಡಿಕೇರಿ ಏ.14 : ವಿಧಾನಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆಯು ಆರಂಭವಾಗಿದ್ದು, ಈ ಸಂಬಂಧ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ವಿಧಾನಸಭಾ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್, 20 ಕೊನೆಯ ದಿನವಾಗಿದೆ. ಏಪ್ರಿಲ್, 21 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಏಪ್ರಿಲ್, 24 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ. ಆ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮೆರವಣಿಗೆ, ಜಾಥ, ರ್ಯಾಲಿ ಮಾಡಿದ್ದಲ್ಲಿ ವೀಡಿಯೋ ಮಾಡಿಕೊಳ್ಳುವುದು ಸೇರಿದಂತೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ವಿಡಿಯೋ ಮತ್ತು ಪ್ಲೈಯಿಂಗ್ ಸ್ಕ್ವಾಡ್ ತಂಡಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳು ಅಂಚೆ ಮತಪತ್ರ ಮೂಲಕ ಮತ ಚಲಾಯಿಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ತಾವು ಹುದ್ದೆಗೆ ನೇಮಕವಾದ ಪ್ರತಿಯನ್ನು ನಮೂನೆ ಜೊತೆ ಲಗತ್ತಿಸಬೇಕು. ವೋಟರ್ ಹೆಲ್ಫ್‍ಲೈನ್ ಆ್ಯಪ್‍ನಲ್ಲಿ ತಮ್ಮ ಮತಕ್ಷೇತ್ರದ ಮತಗಟ್ಟೆ ವಿವರವನ್ನು ಬರೆಯಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾತನಾಡಿ ಸಭೆ ಸಮಾರಂಭಗಳಲ್ಲಿ ಚುನಾವಣಾಧಿಕಾರಿಗಳು ಅನುಮತಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಗಳು ಅನುಮತಿ ಪಡೆದಿರುವ ವಾಹನಗಳಿಗೆ ಅವಕಾಶ ನೀಡಬೇಕು ಎಂದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಖ್, ತಹಶೀಲ್ದಾರರಾದ ಕಿರಣ್ ಜಿ.ಗೌರಯ್ಯ, ಎಸ್.ಎನ್.ನರಗುಂದ, ಟಿ.ಎಂ.ಪ್ರಕಾಶ್, ಎಚ್.ಎನ್.ರಾಮಚಂದ್ರ, ಎಸ್.ಎನ್.ಪ್ರಶಾಂತ್, ಚುನಾವಣಾ ತಹಶೀಲ್ದಾರ್ ರವಿಕುಮಾರ್, ಸೆಕ್ಟರ್ ಅಧಿಕಾರಿಗಳು, ಇತರರು ಇದ್ದರು.