ಮಡಿಕೇರಿ ಏ.23 : ಚುನಾವಣೆಯ ಹೆಸರಿನಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಮತಯಾಚಿಸುವುದನ್ನು ಕೊಡಗು ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಈ ರೀತಿಯ ರಾಜಕಾರಣ ಮಾಡುವ ಅಭ್ಯರ್ಥಿಗಳಿಗೆ ನಮ್ಮ ಬಂಬಲವಿಲ್ಲ ಎಂದು ಕೊರವೇ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆ ಸರ್ವ ಜನಾಂಗಗಳ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲಾ ಜಾತಿ, ಜನಾಂಗದವರು ಶಾಂತಿ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಅಭ್ಯರ್ಥಿಗಳು ಜಾತಿ, ಧರ್ಮ ಮತ್ತು ಜನಾಂಗದ ಆಧಾರದಲ್ಲಿ ಮತಯಾಚಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆಯಲ್ಲಿ ತೊಡಗಿರುವುದು ಗೋಚರಿಸಿದೆ. ಈ ರೀತಿಯ ಬೆಳವಣಿಗೆ ಕೊಡಗು ಜಿಲ್ಲೆಯ ಸಹೋದರತೆಗೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಎಂದರೆ ಒಬ್ಬ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಜಾತಂತ್ರ ವ್ಯವಸ್ಥೆಯ ಪ್ರಕ್ರಿಯೆಯಷ್ಟೆ. ಪ್ರಜ್ಞಾವಂತರ ಜಿಲ್ಲೆ ಕೊಡಗಿನಲ್ಲಿ ಇದನ್ನು ಗೌರವಯುತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಎಂದೂ ಜಾತಿ ಅಥವಾ ದ್ವೇಷದ ರಾಜಕಾರಣ ಕೊಡಗನ್ನು ಕಲುಷಿತಗೊಳಿಸಿಲ್ಲ. ರಾಜ್ಯದ ಇತರ ಜಿಲ್ಲೆಗಳನ್ನು ಹೋಲಿಸಿದರೆ ಇಲ್ಲಿ ಜಾತಿ, ಧರ್ಮ, ಜನಾಂಗದ ರಾಜಕಾರಣ ಇಲ್ಲಿಯವರೆಗೆ ನಡೆದಿಲ್ಲ. ಆದರೆ ಈ ಚುನಾವಣೆಯನ್ನು ಗಮನಿಸಿದರೆ ಅಭ್ಯರ್ಥಿಗಳನ್ನು ಆಯಾ ಜನಾಂಗಗಳಿಗೆ ಸೀಮಿತಗೊಳಿಸಿ ಮತಯಾಚಿಸುತ್ತಿರುವುದು ಕಂಡು ಬಂದಿದೆ. ಹೇಗಾದರು ಮಾಡಿ ಗೆಲವು ಸಾಧಿಸಲೇಬೇಕೆನ್ನುವ ಪೈಪೋಟಿಯಲ್ಲಿ ಸ್ಪರ್ಧಿಗಳು ಹಾಗೂ ಪ್ರತಿಸ್ಪರ್ಧಿಗಳು ಜನಾಂಗ ಆಧಾರಿತ ತಂತ್ರಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಸರಿಯಲ್ಲ ಎಂದು ಪವನ್ ಪೆಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗು ರಕ್ಷಣಾ ವೇದಿಕೆ ಒಂದು ಪಕ್ಷಾತೀತ ಮತ್ತು ಜಾತ್ಯತೀತ ಸಂಘಟನೆಯಾಗಿದೆ. ನಮ್ಮ ಸಂಘಟನೆ ಕೊಡಗಿನ ಅಭಿವೃದ್ಧಿ ಪರ ಚಿಂತನೆ ಮಾಡುತ್ತದೆ ಹೊರತು ಜನಾಂಗ ಆಧಾರಿತ ರಾಜಕಾರಣಕ್ಕೆ ಬೆಂಬಲ ನೀಡುವುದಿಲ್ಲ. ಜಿಲ್ಲೆಯ ಬಗ್ಗೆ ನೈಜ ಕಾಳಜಿ ಯಾರಿಗಿದೆಯೋ ಅವರಿಗೆ ನಮ್ಮ ಬೆಂಬಲವಿದೆಯೇ ಹೊರತು ಸ್ವಜನ ಪಕ್ಷಪಾತಕ್ಕೆ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.










