ನಾಪೋಕ್ಲು ಏ.23 : ಕೊಡಗು ಜಿಲ್ಲೆ ಸೈನ್ಯ ಮತ್ತು ಕ್ರೀಡೆ ಎರಡರಲ್ಲೂ ಹೆಸರುವಾಸಿಯಾಗಿದ್ದು ಹಾಕಿಯ ನಂತರ ಕ್ರಿಕೆಟ್ ಕೂಡ ಚರಿತ್ರೆಯಲ್ಲಿ ದಾಖಲಾಗಿದೆ ಎಂದು ಕರ್ನಲ್ ಮಾಚಿಮಂಡ ಮುತ್ತಪ್ಪ ಹೇಳಿದರು. ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಬಾಳೆಯಡ ಕ್ರಿಕೆಟ್ ನಮ್ಮೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆಯೋಜಿಸುತ್ತಿರುವ ಕ್ರೀಡಾ ಚಟುವಟಿಕೆಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗುತ್ತಿವೆ. ಹಿಂದೆ ಕ್ರೀಡೆ ವೃತ್ತಿಯ ಒಂದು ಭಾಗವಾಗಿರಲಿಲ್ಲ. ಈಗ ಕ್ರೀಡೆ ಮತ್ತು ವೃತ್ತಿ ಎರಡು ಒಂದಕ್ಕೊಂದು ಪೂರಕ ವಾಗಿದ್ದು ಕ್ರೀಡಾಕೂಟಗಳ ಆಯೋಜನೆಯಿಂದ ಜನಾಂಗಬಾಂಧವರ ಬಾಂಧವ್ಯ ವೃದ್ಧಿ ಆಗಲಿದೆ. ಬಾಳೆಯಡ ಕುಟುಂಬಸ್ಥರು ಆಯೋಜಿಸಿರುವ ಕೌಟುಂಬಿಕ ಕ್ರಿಕೆಟ್ ನಮ್ಮೆ ಇತರ ಕುಟುಂಬದವರಿಗೂ ಮಾದರಿ ಆಗಲಿ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಒಲಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ ಮಾತನಾಡಿ ಕುಟುಂಬದವರ ಪ್ರೋತ್ಸಾಹವಿದ್ದಲ್ಲಿ ಕ್ರೀಡೆಯಲ್ಲೂ ಉನ್ನತ ಸ್ಥಾನಕ್ಕೆ ಇರಲು ಸಾಧ್ಯ. ಇಂದು ಶಿಕ್ಷಣದೊಂದಿಗೆ ಕ್ರೀಡೆಗೂ ಉತ್ತೇಜನ ನೀಡುವ ಅವಶ್ಯಕತೆ ಇದೆ. ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ತಮ್ಮ ಕನಸುಗಳನ್ನು ಬದಿಗೊತ್ತಿ ಆಸಕ್ತಿದಾಯಕ ರಂಗದಲ್ಲಿ ಮುಂದೆ ಬರಲು ಪ್ರೋತ್ಸಾಹ ನೀಡಬೇಕು ಎಂದರು. ಕೊಡಗು ಜಿಲ್ಲೆ ಹಾಕಿಗೆ ಹೇಗೆ ಪ್ರಸಿದ್ಧವೋ ಕ್ರಿಕೆಟ್ ಕೂಡ ಅಷ್ಟೇ ಪ್ರಸಿದ್ಧಿಯನ್ನು ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ಅಥ್ಲೆಟಿಕ್ಸ್ ಗೂ ಅಧ್ಯತೆ ನೀಡುವಂತಾಆಗಬೇಕು ಎಂದರು.
ನಿವೃತ್ತ ಕರ್ನಲ್ ಪುಟ್ಟಿಚಂಡ ಗಣಪತಿ ಮಾತನಾಡಿ ಯುವ ಜನಾಂಗಕ್ಕೆ ಹಿರಿಯರು ಮಾರ್ಗದರ್ಶನ ಮಾಡಬೇಕು. ಅವಶ್ಯಕತೆ ಇರುವವರಿಗೆ, ಕುಟುಂಬಗಳ ಏಳಿಗೆಗೆ ಸಹಕರಿಸಬೇಕು ಹಾಕಿ ಯೊಂದಿಗೆ ಕ್ರಿಕೆಟ್ ,ವಾಲಿಬಾಲ್ ಮತ್ತಿತರ ಕ್ರೀಡೆಗಳು ಕೂಡ ಕೌಟುಂಬಿಕ ಉತ್ಸವದಲ್ಲಿ ಸೇರ್ಪಡೆಯಾಗಬೇಕು. ನೆಲಜಿ ಬಾಳೆಯಡ,ನಾಪೋಕ್ಲು ಬಾಳೆಯಡ ಎಂಬ ಪ್ರತ್ಯೇಕತೆ ಇರದೇ ಎಲ್ಲರೂ ಒಟ್ಟಾಗಿ ಉತ್ಸವ ಆಚರಿಸುವಂತಾಗಬೇಕು ಎಂದರು.
ಪರ್ವತಾರೋಹಿ ಜಮ್ಮಡ ಪ್ರೀತ್ ಅಪ್ಪಯ್ಯ ಮಾತನಾಡಿ ಶಿಸ್ತು ಬದ್ಧತೆ, ಛಲ, ಧೈರ್ಯದಿಂದ ಸಾಧನೆ ಮಾಡಲು ಸಾಧ್ಯ ಎಂದ ತನ್ನ ಅನಿಸಿಕೆ ವ್ಯಕ್ತಪಡಿಸಿದರು.
ಬಾಳೆಯಡ ಕ್ರಿಕೆಟ್ ನಮ್ಮೆ ಸಮಿತಿ ಅಧ್ಯಕ್ಷ ಒಲಂಪಿಯನ್, ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ಆರಂಭವಾದಾಗ 109 ತಂಡಗಳು ಪಾಲ್ಗೊಂಡಿದ್ದವು. ಇದೀಗ ಬಾಳೆಯಡ ಕ್ರಿಕೆಟ್ ನಮ್ಮೆಯಲ್ಲಿ 252 ತಂಡಗಳು ಭಾಗವಹಿಸಿ ದಾಖಲೆ ನಿರ್ಮಿಸಿವೆ. ಕೌಟುಂಬಿಕ ಕ್ರಿಕೆಟ್ ನಮ್ಮೆಯ ಯಶಸ್ವಿಗಾಗಿ ಬಾಳೆಯಡ ಫಂಡ್ ಸ್ಥಾಪಿಸಿ ಆರ್ಥಿಕ ಸಂಪನ್ಮೂಲವನ್ನು ಕುಟುಂಬದ ಎಲ್ಲಾ ಸದಸ್ಯರ ಮತ್ತು ದಾನಿಗಳ ಸಹಕಾರದಿಂದ ಕ್ರೋಡೀಕರಿಸಲಾಗಿದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ,
ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕು0ಡ್ರಂಡ ಬೋಪಣ್ಣ, ಬಾಳೆಯಡ ಕುಟುಂಬದ ಹಿರಿಯ ಬಾಳೆಯಡ ಮಂದಪ್ಪ ,ಹಾಕಿ ಅಕಾಡೆಮಿ ಸದಸ್ಯ ಕೇಲೇಟಿರ ಅರುಣ್ ಬೇಬ ಕ್ರೀಡಾಪಟು ಅಚ್ಚಕಾಳೆರ ಪಳಂಗಪ್ಪ, ಮಾಲೇಟಿರಾ ಅಂಜು ಇನ್ನಿತರರು ಉಪಸ್ತಿತರಿದ್ದರು.
ಶಶಿರ್ ಬೆಳ್ಳಿಯಪ್ಪ ಮತ್ತು ಬಿಶನ್ ಬಿದ್ದಪ್ಪ ಪುಟಾಣಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಕರುಣ್ ಕಾಳಪ್ಪ ಸ್ವಾಗತಿಸಿ ಚೆಪ್ಪಡಿರ ಕಾರ್ಯಪ್ಪ ಬಾಳೆಯಡ ದಿವ್ಯ ಕಾರ್ಯಕ್ರಮ ನಿರೂಪಿಸಿದರು ಸದಾ ಕುಶಾಲಪ್ಪ ವಂದಿಸಿದರು.
::: ಮೆರವಣಿಗೆ :::
ಕಾರ್ಯಕ್ರಮಕ್ಕೂ ಮುನ್ನ ಬಾಳೆಯಡ ಕುಟುಂಬಸ್ಥರಿಂದ ದುಡಿ ಕೊಟ್ ಪಾಟ್ ಮೂಲಕ ಆಕರ್ಷಕ ಮೆರವಣಿಗೆ ನಡೆಯಿತು. ಸಾಂಸ್ಕೃತಿಕ ಉಡುಗೆ ಕೊಡುಗೆಗಳೊಂದಿಗೆ ತಳಿಯಕ್ಕಿ ಬೊಳಕ್ ಹಾಗೂ ದುಡಿಕೊಟ್ ಪಾಟ್ ನೊಂದಿಗೆ ಮೆರವಣಿಗೆ ಮೂಲಕ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು.
::: ಧ್ವಜಾರೋಹಣ :::
ಕ್ರಿಕೆಟ್ ಅಕಾಡೆಮಿಯ ಮತ್ತು ಬಾಳೆಯಡ ಕುಟುಂಬಸ್ಥರ ಧ್ವಜಾರೋಹಣವನ್ನು ಅತಿಥಿಗಳು ನೆರವೇರಿಸಲಾಯಿತು. ಆನಂತರ ಅತಿಥಿಗಳು ಶ್ವೇತ ಬಣ್ಣದ ಪಾರಿವಾಳ ಮತ್ತು ವಿವಿಧ ಆಕರ್ಷಕ ಬಣ್ಣಗಳ ಬೆಲೂನ್ಗಲ ಗೊಂಚಲನ್ನು ಹಾರಿ ಬಿಡಲಾಯಿತು.
ಪ್ರದರ್ಶನ ಪಂದ್ಯ:
ಮುಖ್ಯ ಅತಿಥಿಗಳು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಬ್ಯಾಟಿನಿಂದ ಚಂಡು ಹೊಡೆಯುವುದರ ಮೂಲಕ ಪ್ರದರ್ಶನ ಪಂದ್ಯಕ್ಕೆ ಚಾಲನೆ ನೀಡಿದರು. ಚೆಟ್ಟಳ್ಳಿಯ ಜೋಮಲೆ ಪೊಮ್ಮಕ್ಕಡ ತಂಡ ಹಾಗೂ ಟಿ ಶೆಟ್ಟಿಗೇರಿ ಯ ಸಂಭ್ರಮ ಪೊಮ್ಮಕ್ಕಡ ತಂಡಗಳಿಂದ ಪ್ರದರ್ಶನ ಪಂದ್ಯ ನಡೆಯಿತು. ಚೆಟ್ಟಳ್ಳಿ ಯ ಜೋಮಲೆ ಪೊಮ್ಮಕ್ಕಡ ತಂಡದ ವಿರುದ್ದ ಟಿ ಶೆಟ್ಟಿಗೇರಿ ಯ ಸಂಭ್ರಮ ಪೊಮ್ಮಕ್ಕಡ ತಂಡ ಗೆಲುವು ಸಾಧಿಸಿತು.
::: ಪ್ರಥಮ ಪಂದ್ಯಾಟ :::
ಅತಿಥಿಯ ಬಾಳೆಯಡ ಮತ್ತು ಮುಂಡೋಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಳೆಯಡ ತಂಡ ಗೆಲುವು ಸಾಧಿಸಿ ಮುಂದಿನ ಆಟಕ್ಕೆ ಮುಂದಡಿ ಇಟ್ಟಿದೆ.
ಸಾಂಸ್ಕೃತಿಕ ಕಾರ್ಯಕ್ರಮ;
ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಆಕರ್ಷಕ ಬ್ಯಾಂಡ್ ಪ್ರದರ್ಶನ ವೀಕ್ಷಕರ ಗಮನ ಸೆಳೆಯಿತು. ಬಳಿಕ ನಡೆದ ತಿಂಗಕೋರು ಕಾವೇರಿಕ್ ಮೊಟ್ಟು ತಂಡದಿಂದ ಪರೆಕಳಿ, ಕತ್ತಿಯಾಟ್, ಕೋಲಾಟ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
ವರದಿ : ದುಗ್ಗಳ ಸದಾನಂದ