ಮಡಿಕೇರಿ ಮೇ 16 : ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಶಾಸಕರುಗಳಾಗಿ ಆಯ್ಕೆಯಾಗಿರುವ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರುಗಳು ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳಿಗೆ ಶೀಘ್ರ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮುದ್ದ ಕಳಲ ಯುವಕ ಸಂಘ ಮನವಿ ಮಾಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಜ್ಯೋತಿಕುಮಾರ್ ಸ್ವತಂತ್ರ್ಯ ಪೂರ್ವದಿಂದಲೇ ಕೊಡಗಿನ ವಿವಿಧೆಡೆ ಕಾಫಿ ತೋಟಗಳ ಲೈನ್ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳು ಸ್ವಂತ ಸೂರು ಮತ್ತು ವಿವಿಧ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ನಿವೇಶನ ಮಂಜೂರು ಮಾಡುವ ಮೂಲಕ ಬಡ ಕುಟುಂಬಗಳನ್ನು ಲೈನ್ ಮನೆಯಿಂದ ಮುಕ್ತಗೊಳಿಸಬೇಕೆಂದು ಕೋರಿದ್ದಾರೆ.
ಕಳೆದ 2 ವರ್ಷಗಳಿಂದ ಬೀದಿಗಿಳಿದು ಹೋರಾಟ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಟೀಕಿಸಿರುವ ಅವರು, ನೂತನ ಶಾಸಕರುಗಳ ಅವಧಿಯಲ್ಲಾದರು ಲೈನ್ ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳಿಗೆ ನಿವೇಶನ ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಬೇಕು ಎಂದು ಹೇಳಿದ್ದಾರೆ.
ಇಬ್ಬರು ನೂತನ ಶಾಸಕರಿಗು ಅಭಿನಂದನೆ ಸಲ್ಲಿಸುವುದಾಗಿ ಜ್ಯೋತಿಕುಮಾರ್ ತಿಳಿಸಿದ್ದಾರೆ.










