ನಾಪೋಕ್ಲು ಮೇ 17 : ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು, ತಾಳ್ಮೆ, ಸಂಯಮ, ಶಿಕ್ಷಣ ಸೇರಿದರೆ ಮಾತ್ರ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ನಾಪೋಕ್ಲು ಗ್ರಾ.ಪಂ ಸದಸ್ಯ ಹಾಗೂ ಸ್ಥಳದಾನಿ ಕುಲ್ಲೇಟಿರ ಅರುಣ್ ಬೇಬ ಹೇಳಿದರು.
ನಾಪೋಕ್ಲು ಬಳಿಯ ಹಳೇ ತಾಲೂಕಿನ ಶ್ರೀ ಭಗವತಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಹಳೇ ತಾಲೂಕು ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿ ಹಾಗೂ ಕಾರ್ಯಕರ್ತೆಯರ ಉತ್ತಮ ಸೇವೆ ಹಾಗೂ ಕಠಿಣ ಪರಿಶ್ರಮದಿಂದ ಈ ಅಂಗನವಾಡಿ ಕೇಂದ್ರವು ಮಡಿಕೇರಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಮಾದರಿ ಅಂಗನವಾಡಿ ಪ್ರಶಸ್ತಿ ಪಡೆದಿರುವುದು ಶ್ಲಾಘನೀಯ,ಈ ಅಂಗನವಾಡಿಯಲ್ಲಿ ಇನ್ನು ಕೆಲವು ಸಮಸ್ಯೆಗಳಿದ್ದು, ಇದನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆಯುವಂತ್ತಾಗಬೇಕು. ಇದಕ್ಕೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದು ಅರುಣ್ ಬೇಬ ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಲ್ಲಮಾವಟಿ ವೃತ್ತದ ಮೇಲ್ವಿಚಾರಕಿ ಶೀಲಾ ಮಾತನಾಡಿ ಹಳೇ ತಾಲೂಕಿನ ವಿವಿಧ ಮಹಿಳಾ ಸಂಘಸಂಸ್ಥೆಯ ಪದಾಧಿಕಾರಿಗಳು ಮುತುವರ್ಜಿವಹಿಸಿ ಅಂಗನವಾಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಎಲ್ಲಾರೀತಿಯಲ್ಲಿ ಸಹಕಾರ ನೀಡಿದ್ದಾರೆ. ಅಲ್ಲದೆ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸುವಲ್ಲಿ ಈ ಅಂಗನವಾಡಿ ಕೇಂದ್ರ ಯಶಸ್ವಿಯಾಗಿದೆ.ಅದರಂತೆ ಇಲ್ಲಿನ ಶಿಕ್ಷಕಿ ಭಾಗ್ಯವತಿ ಅವರ ಉತ್ತಮ ಸೇವೆಯನ್ನು ಗುರುತಿಸಿ ಜಿಲ್ಲಾಮಟ್ಟದ ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಬಹಳ ಮುಖ್ಯವಾಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕೇಂದ್ರಕ್ಕೆ ಸ್ಥಳವನ್ನು ನೀಡುವ ಮೂಲಕ ಸಹಕಾರ ನೀಡಿದ ದಾನಿಗಳಾದ ಕುಲ್ಲೇಟಿರ ಅರುಣ್ ಬೇಬ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ ಅವರು ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮಲ್ಲಿ ಹಳೇತಾಲೂಕಿನ ಛಾಯಾ ಅವರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಬಳಿಕ ನಡೆದ ಮಕ್ಕಳ ವಿವಿಧ ನೃತ್ಯ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ರಂಜಿಸಿತು.
ಈ ಸಂದರ್ಭ ನಾಪೋಕ್ಲು ಗ್ರಾ. ಪಂ. ಸದಸ್ಯರಾದ ಕುಂದೈರಿರ ರೇಖಾ, ಕುಲ್ಲೇಟಿರ ಹೇಮಾ,ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಬೊಳ್ಳಮ್ಮ ನಾಣಯ್ಯ,ಅಂಗನವಾಡಿ ಶಿಕ್ಷಕಿ ಭಾಗ್ಯವತಿ, ಸಹಾಯಕಿ ಮಮತ,ಭಗವತಿ ಮಹಿಳಾ ಸಮಾಜದ ಸದಸ್ಯೆ ದೇವಕಿ, ನಿವೃತ ಅಂಗನವಾಡಿ ಶಿಕ್ಷಕಿ ಮೀನಾ, ತಾಲ್ಲೂಕು ಅಂಗನವಾಡಿ ಸಂಘದ ಅಧ್ಯಕ್ಷೆ ಪವಿತ್ರ, ಕಾರ್ಯದರ್ಶಿ ಆಶಲತಾ,ಸ್ತ್ರೀಶಕ್ತಿ ಮತ್ತು ಸ್ವಸಾಯ ಸಂಘದ ಸದಸ್ಯರು ಹಾಗೂ ಮಕ್ಕಳ ಪೋಷಕರು ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು