ಮಡಿಕೇರಿ ಮೇ 22 : ಸದ್ಯದಲ್ಲಿಯೇ ಮುಂಗಾರು ಆರಂಭವಾಗಲಿದ್ದು, ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಮಳೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆಯಿಂದ ಜೀವಹಾನಿ, ಜಾನುವಾರು ಹಾನಿಯಾದಲ್ಲಿ ಕೂಡಲೇ ವರದಿ ನೀಡಿ, ಪರಿಹಾರ ವಿತರಿಸುವಂತೆ ಎಲ್ಲಾ ತಹಶೀಲ್ದಾರರಿಗೆ ಮತ್ತು ಬೆಳೆ ಹಾನಿ ಸಂಭವಿಸಿದ್ದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೂಕ್ತ ರೀತಿಯಲ್ಲಿ ಅಂದಾಜು ನಷ್ಟದ ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿರುವುದರ ಕುರಿತು ಮತ್ತೊಮ್ಮೆ ಪರಿಶೀಲಿಸಿ, ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಅರಣ್ಯ ಇಲಾಖೆಯಿಂದ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬೀಳುವ ಮರಗಳನ್ನು ಕೂಡಲೇ ತೆರವುಗೊಳಿಸಲು ಅಗತ್ಯವಿರುವ ಎಲ್ಲಾ ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾದಂತಹ ರೋಗಗಳು ಹರಡದಂತೆ ಎಚ್ಚರವಹಿಸಿ. ಈ ಬಗ್ಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸೂಚನೆ ನೀಡುವಂತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಗ್ನಿಶಾಮಕ ದಳ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸನ್ನದ್ಧವಾಗಿರುವಂತೆ, ಗೃಹರಕ್ಷಕ ದಳ ಸಿಬ್ಬಂದಿಗಳು ಸಹ ತುರ್ತು ಸೇವೆಗೆ ಲಭ್ಯವಿರುವಂತೆ ಕ್ರಮಕೈಗೊಳ್ಳಬೇಕು. ಹಾಗೂ ವಿದ್ಯುತ್ ವ್ಯತ್ಯಯ ಉಂಟಾದಲ್ಲಿ ಕೂಡಲೇ ಸರಿಪಡಿಸಬೇಕು. ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಿ, ವಿದ್ಯುತ್ ತಂತಿಯಿಂದ ಯಾವುದೇ ಜೀವಹಾನಿಯಾಗದಂತೆ ಎಚ್ಚರವಹಿಸಿ ಎಂದು ಸೆಸ್ಕ್ ಇಇ ಅವರಿಗೆ ಸೂಚಿಸಿದರು.
ಸೆಸ್ಕ್ ಇಇ ಅನಿತಾ ಬಾಯಿ ಮಾತನಾಡಿ ಮುನ್ನೆಚ್ಚರಿಕೆಯಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, 75 ಗ್ಯಾಂಗ್ ಮನ್ ನೇಮಕ ಮಾಡಿಕೊಳ್ಳಲು ಅನುಮೋದನೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಜನರಿಗೆ ಅನುಕೂಲವಾಗುವಂತೆ 24*7 ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆಗಳನ್ನು ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು. ಸಹಾಯವಾಣಿಗೆ ಬರುವ ದೂರುಗಳು ಕಡ್ಡಾಯವಾಗಿ ದಾಖಲಾಗಬೇಕು. ಪರಿಹಾರಕ್ಕೆ ದೂರನ್ನು ಯಾರಿಗೆ ವರ್ಗಾಯಿಸಲಾಗಿದೆ ಎಂಬುದರ ವಿವರ ನಮೂದಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಮಳೆ, ಪ್ರವಾಹ ಸಂದರ್ಭದಲ್ಲಿ ಏನೇ ತೊಂದರೆಯಾದಲ್ಲಿ ಕೂಡಲೇ ಘಟನಾ ಸ್ಥಳಕ್ಕೆ ಹೋಗಬೇಕು. ಜೀವ, ಆಸ್ತಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಮಳೆಯಿಂದಾಗಿ ಗಿಡ-ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ವಿದ್ಯುತ್ ಕಡಿತ, ಕುಡಿಯುವ ನೀರಿಗೆ ತೊಂದರೆಯಂತಹ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಕಂದಾಯ, ಸೆಸ್ಕ್, ಅರಣ್ಯ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳ ಮಧ್ಯೆ ಸಮನ್ವಯ ಮುಖ್ಯವಾಗಿದ್ದು, ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಹೇಳಿದರು.
ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯವುದು. ಹಾಗೂ ಸೂಕ್ಷ್ಮ ಪ್ರದೇಶದಲ್ಲಿನ ಜನರನ್ನು ಬೇರೇಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಗ್ರಾ.ಪಂ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸುವುದು, ತಮ್ಮ ಇಲಾಖಾ ಹಂತದಲ್ಲಿಯೂ ಸಹ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ವಿವಿಧ ತಂಡಗಳು ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಪ್ರಾಕೃತಿಕ ವಿಕೋಪ ನಿರ್ವಹಣಾ ಸಂಯೋಜಕರಾದ ಅನನ್ಯ ವಾಸುದೇವ್ ಹಲವು ಮಾಹಿತಿ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ವಿವಿಧ ಇಲಾಖೆ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ತಹಶೀಲ್ದಾರರು ಇತರರು ಹಾಜರಿದ್ದರು.