ಮಡಿಕೇರಿ ಮೇ.25 : ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತರಗತಿಯು ಇದೇ ಮೇ, 29 ರಿಂದ ಆರಂಭವಾಗಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ ತಿಳಿಸಿದ್ದಾರೆ.
ಪ್ರಸಕ್ತ 2023-24 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮೇ, 29 ರಿಂದ ಆರಂಭವಾಗಲಿದ್ದು, ರಾಜ್ಯಾದ್ಯಂತ ಏಕರೂಪ ಯಶಸ್ವಿ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ತಿಳಿಸಿದರು.
ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಪರೀಕ್ಷೆ ಮತ್ತು ಮೌಲ್ಯಾಂಕನ ವಿಶ್ಲೇಷಣೆ, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶ ಮುಖಿ ಚಟುವಟಿಕೆಗಳ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದಲ್ಲಿನ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯಕವಾಗುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ರಾಜ್ಯ/ ಜಿಲ್ಲಾ ಕಚೇರಿಗಳಿಂದ ನಿಯೋಜಿಸಿದ ಜಿಲ್ಲಾ ಮತ್ತು ತಾಲ್ಲೂಕು ನೋಡಲ್ ಅಧಿಕಾರಿಗಳು, ಕ್ಲಸ್ಟರ್ ಹಂತದ ಸಿಆರ್‍ಪಿಗಳು ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಹಂತದಲ್ಲಿ ಉಪ ನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ಅವರು ತಮ್ಮ ತಮ್ಮ ವ್ಯಾಪ್ತಿಗೆ ಅನುಗುಣವಾಗಿ ಕ್ರೀಯಾಶೀಲ ಮೇಲ್ವಿಚಾರಣೆ ಮತ್ತು ಶೈಕ್ಷಣಿಕ ಉಸ್ತುವಾರಿ ಕ್ರೀಯಾ ಯೋಜನೆಯನ್ನು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಸೂಚಿಸಿದಂತೆ ತಯಾರಿಸಿಕೊಂಡು ಶಾಲೆಗಳ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
‘ಪೂರ್ವ ತಯಾರಿ, ಇಲಾಖಾ ಪ್ರೋತ್ಸಾಹದಾಯಕ ಯೋಜನೆಗಳಾದ ಮಧ್ಯಾಹ್ನ ಉಪಹಾರ ಯೋಜನೆ, ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ ವಿತರಣೆ ಹಾಗೂ ಶಾಲೆಗಳಲ್ಲಿ ಉತ್ತಮ ವಾರ್ಷಿಕ ಕ್ರಿಯಾ ಯೋಜನೆಯೊಂದಿಗೆ ಮಕ್ಕಳ ದಾಖಲಾತಿ ಅಭಿವೃದ್ಧಿಪಡಿಸಲು ಮಿಂಚಿನ ಸಂಚಾರ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.’
ಸೇತುಬಂಧ ಶಿಕ್ಷಣ ಪ್ರಯುಕ್ತ ಶೈಕ್ಷಣಿಕ ವರ್ಷದ ವಾರ್ಷಿಕ ಚಟುವಟಿಕೆಗಳಾದ ಬೋಧನಾ ಕಲಿಕೆಗೆ ಮಾಹೆವಾರು ಪರೀಕ್ಷೆಗಳು ಹಾಗೂ ಮೌಲ್ಯಮಾಪನ ವಿಶ್ಲೇಷಣೆ, ವಿವಿಧ ಕಾರ್ಯಕ್ರಮಗಳ ನಿರ್ವಹಣೆಗಾಗಿ ಅವಧಿ ಮತ್ತು ದಿನಾಂಕಗಳನ್ನು ಪೂರ್ವಭಾವಿಯಾಗಿ ಚರ್ಚಿಸುವುದು ಮತ್ತು ಶಾಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಷ್ಠಾನಕ್ಕೆ ಒತ್ತು ನೀಡುವುದು. ಶಾಲಾ ಪ್ರಾರಂಭೋತ್ಸವವು ಅತ್ಯಂತ ಉತ್ಸಾಹದಿಂದ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್‍ಡಿಎಂಸಿ ಸೇರಿ ಮಕ್ಕಳನ್ನು ಕಲಿಕಾ ಸಾಧಕರನ್ನು ಸ್ವಾಗತಿಸುವ ರೀತಿಯಲ್ಲಿ ವಿಶೇಷವಾಗಿ ಸ್ವಾಗತಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು ವಿವರಿಸಿದ್ದಾರೆ.
‘ಶಾಲೆಯನ್ನು ತಳಿರುತೋರಣಗಳಿಂದ ಅಲಂಕರಿಸಿ ಶಾಲಾ ವಾತಾವರಣವನ್ನು ಆಕರ್ಷಣೀಯಗೊಳಿಸುವುದು, ಶಾಲಾ ಆರಂಭದಿಂದಲೇ ಮಕ್ಕಳ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನದ ಬಿಸಿ ಊಟದ ಕಾರ್ಯಕ್ರಮವನ್ನು ಸಿಹಿ ಊಟದೊಂದಿಗೆ ಆರಂಭಿಸಲಾಗುತ್ತದೆ. ಹೀಗೆ ವಿವಿಧ ಕಾರ್ಯಗಳು ಶಾಲಾ ಪ್ರಾರಂಭೋತ್ಸವದಲ್ಲಿ ನಡೆಯಲಿವೆ ಎಂದು ಸಿ.ರಂಗಧಾಮಯ್ಯ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 501 ಪ್ರಾಥಮಿಕ ಶಾಲೆಗಳು ಮತ್ತು 170 ಪ್ರೌಢ ಶಾಲೆಗಳು ಒಟ್ಟು 671 ಶಾಲೆಗಳಲ್ಲಿ ಮೇ, 29 ರಂದು ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗಲಿದೆ ಎಂದು ಸಿ.ರಂಗಧಾಮಯ್ಯ ಮಾಹಿತಿ ನೀಡಿದ್ದಾರೆ.