ಮಡಿಕೇರಿ ಮೇ 29 : ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಅಂಬಾ ಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘ ಹಾಗೂ ಮಹಿಳಾ ವೇದಿಕೆ ತಾಳತ್ತಮನೆ ಇದರ 27ನೇ ವಾರ್ಷಿಕ ಮಹಾಸಭೆಯು ಸಂಘದ ನಿವೇಶನದಲ್ಲಿ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಸಹಾಯಕ ಔಷಧಿ ನಿಯಂತ್ರಕ ಶಂಕರ್ ನಾಯ್ಕ, ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಕುಟುಂಬ ಸದಸ್ಯರೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ತಿಳಿ ಹೇಳಿ ಕೊಡಬೇಕೆಂದು ಮನವಿ ಮಾಡಿದರಲ್ಲದೇ, ಸಂಘದ ಕಟ್ಟಡದ ಕೆಲಸ ಸಮಾಜ ಬಾಂಧವರ ಸಹಕಾರದಿಂದ ಸಂಪೂರ್ಣಗೊಳ್ಳಲೆಂದು ಆಶಿಸಿದರು.
ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಬು ನಾಯ್ಕ ಮಾತನಾಡಿ, ಸಂಘದ ಸಂಘಟನೆಗಾಗಿ ಪ್ರತಿಯೊಬ್ಬರು ಶ್ರಮವಹಿಸಿ ಕಾರ್ಯನಿರ್ವಹಿಸುವ ಮೂಲಕ ಸಂಘದ ಚಟುವಟಿಕೆಗಳ ಬಗ್ಗೆ ಗ್ರಾಮೀಣ ಭಾಗದ ಸಮುದಾಯದ ಮಂದಿಗೆ ತಿಳಿಸಿ ಕೊಡಬೇಕು ಹಾಗೂ ಜನಾಂಗ ಬಾಂಧವರ ಏಳಿಗೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ ಮಹಾಸಭೆಗೆ ಸಮಾಜ ಬಾಂಧವರ ಹಾಜರಾತಿ ಕಡಿಮೆ ಇದ್ದ ಬಗ್ಗೆ ಬೇಸರ ವ್ಯಕ್ತಪಡಿಸಿ, ಸಮಾಜ ಬಾಂಧವರು ಸಂಘದ ಮೇಲಿನ ತಾತ್ಸಾರ ಮನೋಭಾವವನ್ನು ಬಿಟ್ಟು ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಬಂದು ಭಾಗವಹಿಸಬೇಕೆಂದು ಮನವಿ ಮಾಡಿದರು.
ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ.ಗುರುವಪ್ಪ, ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ಜಿ.ಆರ್.ದೇವಕಿ, ಮಡಿಕೇರಿ ಮಹಿಳಾ ವೇದಿಕೆ ಅಧ್ಯಕ್ಷರಾದ ರತ್ನಮಂಜರಿ ನರಸಿಂಹ, ಕಾನೂರು ಯುವ ವೇದಿಕೆ ಅಧ್ಯಕ್ಷ ಎಂ.ಆರ್.ಮೋಹನ ಉಪಸ್ಥಿತರಿದ್ದರು. ಹೂವಮ್ಮ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಎಂ.ಟಿ.ಪವನ್ ಕುಮಾರ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಎ.ಎಂ.ನರಸಿಂಹ ಸರ್ವರನ್ನು ವಂದಿಸಿದರು.
ಮೃತಪಟ್ಟ ಸಂಘದ ಸದಸ್ಯರಿಗೆ ಹಾಗೂ ಸಮಾಜ ಬಾಂಧವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಸಂಘದ 2022-23ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಪವನ್ ಮಂಡಿಸಿದರು. ಸಭೆಯ ಅನುಮೋದನೆಯ ಬಳಿಕ ಯುವ ವೇದಿಕೆಯ ಕೋಶಾಧಿಕಾರಿ ಎಂ.ಕೆ.ಸಂತೋಷ್ ಕುಮಾರ್ 2022-23ರ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದರು.
ನಂತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಅಲ್ಲದೇ ಯುವ ವೇದಿಕೆಯ ಅಧ್ಯಕ್ಷ ಎಂ.ಆರ್.ಮೋಹನ್ ಕಾನೂರು ಅವರ ಸಲಹೆ ಮೇರೆಗೆ ಸ್ವಾಗತಿ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಆಟೋಟ ಸ್ಪರ್ಧೆಗಳ ಸಮಿತಿ, ಸ್ವಚ್ಛತಾ ಸಮಿತಿ ಅಲಂಕಾರ ಸಮಿತಿಯನ್ನು ರಚಿಸಿ, ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಸಭಾ ಕಾರ್ಯಕ್ರಮದ ನಂತರ ಚಂದ್ರಾವತಿ ಮತ್ತು ರತ್ನಾವತಿ ಅವರ ಮುಂದಾಳತ್ವದಲ್ಲಿ ಕುಂಡಾಡು ಚಾಮಕಜೆ ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪದಾಧಿಕಾರಿಗಳ ಆಯ್ಕೆ : ಸಭೆಯಲ್ಲಿ 2023-24ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷರಾಗಿ ಎಂ.ಎಂ.ಪರಮೇಶ್ವರ, ಉಪಾಧ್ಯಕ್ಷರಾಗಿ ಎಂ.ಎಂ.ದೇವಕಿ ಜಿ ರಾಮಣ್ಣ, ಕಾರ್ಯದರ್ಶಿಯಾಗಿ ಎಂ.ಟಿ.ಪವನ್, ಸಹ ಕಾರ್ಯದರ್ಶಿಯಾಗಿ ಎ.ಎಂ.ನರಸಿಂಹ, ಕೋಶಾಧಿಕಾರಿಯಾಗಿ ಎಂ.ಎಸ್.ಕಾಂತಿ ಅವರನ್ನು ನೇಮಕಗೊಳಿಸಲಾಗಿದೆ.
ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘದ ಅಧ್ಯಕ್ಷರಾಗಿ ಎಂ.ಆರ್.ಮೋಹನ, ಉಪಾಧ್ಯಕ್ಷರಾಗಿ ಕೆ.ಜಿ.ಶಶಿಕಾಂತ್, ಕಾರ್ಯದರ್ಶಿಯಾಗಿ ಎಂ.ಕೆ.ಸಂತೋಷ್ ಕಟ್ಟೆಮಾಡು, ಸಹ ಕಾರ್ಯದರ್ಶಿಯಾಗಿ ಡಿ.ಪಿ.ವಿನಯ್ ಕುಮಾರ್, ಕೋಶಾಧಿಕಾರಿಯಾಗಿ ಎಂ.ಆರ್.ಭುವನೇಶ್ ಆಯ್ಕೆಯಾಗಿದ್ದಾರೆ.