ಮಡಿಕೇರಿ ಜೂ.15: ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು ಜಿಲ್ಲೆಯ ಐವರು ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ತಿಳಿಸಿದ್ದಾರೆ.
ಸಂಘದ ವತಿಯಿಂದ ನೀಡಲಾಗುವ ಅತ್ಯತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ಕನ್ನಡ ಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು ಭಾಜನರಾಗಿದ್ದಾರೆ. ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ‘ಏಷ್ಯನ್ ಗೇಮ್ಸ್,ಕಾಮನ್ ವೆಲ್ತ್ ಗೆ ಅರ್ಹತೆ ಪಡೆದ ಕೊಡಗಿನ ಎ.ಬಿ.ಬೆಳ್ಳಿಯಪ್ಪ’ ವರದಿಗೆ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ಪ್ರತಿನಿಧಿ ಪತ್ರಿಕೆಯ ಜಿಲ್ಲಾ ವರದಿಗಾರ ಸುರೇಶ್ ಬಿಳಿಗೇರಿ ಭಾಜನರಾಗಿದ್ದಾರೆ.ಪ್ರತಿನಿಧಿಯಲ್ಲಿ ಪ್ರಕಟಗೊಂಡ ‘ಕೊಡಗಿನಲ್ಲಿ ರಸ್ತೆಗಳೇ ಮಾಯ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ.ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಸೋಮವಾರಪೇಟೆ ವರದಿಗಾರ ಕವನ್ ಕಾರ್ಯಪ್ಪ ಭಾಜನರಾಗಿದ್ದಾರೆ.ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ‘ಕಾಡಾನೆ ಕಾಟದಿಂದ ಕಂಗಾಲಾದ ಕೃಷಿಕ’ ವರದಿಗೆ ಪ್ರಶಸ್ತಿ ದೊರೆತಿದೆ.ಸಂಘದ ಸಲಹೆಗಾರರಾದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತ ಶಯನ ಅವರು ತಮ್ಮ ತಾಯಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯ ಕುಶಾಲನಗರ ವರದಿಗಾರ ಕೆ.ಎಸ್.ಮೂರ್ತಿ ಭಾಜನರಾಗಿದ್ದಾರೆ.
‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ ಗಿರಿಜನರಿಗೆ ವಾಸಕ್ಕೆ ಪ್ಲಾಸ್ಟಿಕ್ ಹೊದಿಕೆಯೆ ಸೂರು’ ಎಂಬ ವರದಿ ಪ್ರಶಸ್ತಿಗೆ ಭಾಜನವಾಗಿದೆ.ಸಂಘದಿಂದ ದೃಶ್ಯ ಮಾಧ್ಯಮ ವಿಭಾಗಕ್ಕೆ ನೀಡಲಾಗುವ ಅತ್ಯುತ್ತಮ ಮಾನವೀಯ ವರದಿ ಹಾಗೂ ಕೊಡಗಿನ ಜ್ವಲಂತ ಸಮಸ್ಯೆಗಳ ಕುರಿತ ವರದಿ ಪ್ರಶಸ್ತಿಗೆ ಟಿವಿ1 ಚಾನಲ್ ನ ಸಿಇಓ ಹೆಚ್.ಎಸ್.ಪ್ರಸಾದ್ ಭಾಜನರಾಗಿದ್ದಾರೆ. ‘ರಾಮಕೊಲ್ಲಿಯ ಬಡ ಕುಟುಂಬಕ್ಕೆ ಸಿಗದ ವಿದ್ಯುತ್ ಸಂಪರ್ಕ’ ಹಾಗೂ ‘ವರುಣಾರ್ಭಟಕ್ಕೆ ತತ್ತರಿಸಿದ ಗಡಿ ಗ್ರಾಮಗಳು’ ಎಂಬ ವರದಿಗಳಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಗಳನ್ನು ಜೂ.18 ರಂದು ಮಡಿಕೇರಿ ಪತ್ರಿಕಾಭವನದಲ್ಲಿ ನಡೆಯುವ ಸಂಘದ ವಾರ್ಷಿಕೋತ್ಸವದಲ್ಲಿ ವಿತರಣೆ ಮಾಡಲಾಗುವುದು ಎಂದು ಉಜ್ವಲ್ ರಂಜಿತ್ ತಿಳಿಸಿದ್ದಾರೆ.