ಕುಶಾಲನಗರ ಜೂ.24 : 150 ಗಂಟೆಗಳಿಗೂ ಅಧಿಕ ಕಾಲ ಯುದ್ಧ ವಿಮಾನದ ಹಾರಾಟ ನಡೆಸಿ ಸಾಧನೆ ಮಾಡಿ ವಾಯು ಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಕೊಡಗಿನ ಸಚಿನ್ ಬೇಂಬೊರೆ ನೇಮಕಗೊಂಡಿದ್ದಾರೆ.
ಕುಶಾಲನಗರದ ರಥ ಬೀದಿಯ ಉದ್ಯಮಿ ಪ್ರಸನ್ನ ಕುಮಾರ್ ಬಾಂಬೊರೆ ಮತ್ತು ವಾಣಿ ದಂಪತಿಯ ಪುತ್ರ ಸಚಿನ್ ಬೇಂಬೊರೆ ಇದೀಗ ಫ್ಲೈಯಿಂಗ್ ಆಫೀಸರ್ ರ್ಯಾಂಕ್ ಪಡೆದು ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸಿದ್ದಾರೆ.
ಯುಪಿಎಸ್ಸಿ ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ನಲ್ಲಿ ಪರೀಕ್ಷೆಗೆ ದೇಶದ ನಾಲ್ಕು ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಕೇವಲ ಒಂಬತ್ತು ಜನ ಆಯ್ಕೆಯಾಗಿದ್ದು, ಅದರಲ್ಲಿ ಸಚಿನ್ ಕೂಡ ಒಬ್ಬರು. ತರಬೇತಿಯಲ್ಲಿ ಕ್ರೀಡೆ, ಪ್ಲೈಯಿಂಗ್, ಯುದ್ಧ ಸಂದರ್ಭದಲ್ಲಿ ತಯಾರಿ, ಹೆಲಿಕಾಪ್ಟರ್ ಮತ್ತು ಫೈಟರ್ ಜೆಟ್ ಗಳಲ್ಲಿ ತರಬೇತಿ ಪಡೆದಿದ್ದು, ಇದೀಗ ರಜೆಯಲ್ಲಿ ಕುಶಾಲನಗರಕ್ಕೆ ಬಂದ ಸಂದರ್ಭ ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡಿ ಅತ್ಯಂತ ಕಠಿಣ ಪರಿಶ್ರಮ ಮತ್ತು ತರಬೇತಿಯಿಂದ ಈ ಮಟ್ಟಕ್ಕೆ ಹೋಗಲು ಸಾಧ್ಯವಾಗಿದೆ. ಸಾಧನೆಗೆ ನನ್ನ ಶಿಕ್ಷಕರು, ತರಬೇತಿ ನೀಡಿದ ತರಬೇತಿದಾರರು ಹಾಗೂ ಕುಟುಂಬದ ಸಹಕಾರ ಪ್ರಮುಖವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ತಾಯಿನಾಡನ್ನು ಕಾಪಾಡುವ ಅವಕಾಶ ತನಗೆ ಒದಗಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸಚಿನ್ ಹೈದರಾಬಾದ್ ಸಮೀಪದ ದುಂಡಿಗಲ್ ವಾಯು ಸೇನಾ ಅಕಾಡೆಮಿಯಿಂದ ಫ್ಲೈಯಿಂಗ್ ಆಫೀಸರ್ ತರಬೇತಿ ಪಡೆದಿದ್ದರು.