ಮಡಿಕೇರಿ ಜೂ.26 : ಸತ್ಯ ನಿಷ್ಟೂರ ವರದಿಗಾರಿಕೆಯ ಮೂಲಕ, ಸಮಾಜದ ಯಾವುದೇ ವಿಷಯಗಳನ್ನು ತಮ್ಮದೇ ಆದ ಹೊಸ ಆಯಾಮದಿಂದ ನೋಡುವ ಪರಿಕಲ್ಪನೆಯನ್ನು ಮೂಡಿಸಿದ ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ಮನು ಶೆಣೈರವರ ನೆನಪುಗಳನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕೆನ್ನುವ ಆಶಯವನ್ನು ಗಣ್ಯರು ವ್ಯಕ್ತಪಡಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಸಮಾಚಾರ ಅಭಿಮಾನಿ ಬಳಗ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಆಯೋಜಿತ ‘ದಿ.ಬಿ.ಎನ್.ಮನು ಶೆಣೈ ನೆನಪು’ ಕಾರ್ಯಕ್ರಮವನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಉದ್ಘಾಟಿಸಿದರು.
ಈ ಸಂದರ್ಭ ಮೌನಾಚರಣೆ ಮತ್ತು ಮನು ಶೆಣೈ ಅವರ ಭಾವ ಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.
ನಂತರ ಮಾತನಾಡಿದ ಟಿ.ಪಿ.ರಮೇಶ್, ವರ್ಷದ ಹಿಂದೆಯಷ್ಟೆ ನಮ್ಮನ್ನು ಅಗಲಿದ ಮನು ಶೆಣೈ ಅವರು ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಳ್ಳುವ ಕಾರ್ಯ ಅಗತ್ಯವಾಗಿ ನಡೆಯಬೇಕಾಗಿದೆ. ಸುದೀರ್ಘ ಇಪ್ಪತ್ತಾರು ವರ್ಷ ಕೊಡಗು ಸಮಾಚಾರ ವಾರ ಪತ್ರಿಕೆಯನ್ನು ಅತ್ಯಂತ ಶ್ರದ್ಧೆಯಿಂದ ಮನು ಶೆಣೈ ಅವರು ಹೊರ ತಂದಿದ್ದಾರೆ. ಅವರು ತಮ್ಮ ಪತ್ರಿಕಾ ವೃತ್ತಿ ಧರ್ಮವನ್ನು ಅತ್ಯಂತ ಗಟ್ಟಿಯಾಗಿ ಪ್ರತಿಪಾದಿಸಿಕೊಂಡು ಬಂದವರಾಗಿದ್ದು, ಭ್ರಷ್ಟ ಅಧಿಕಾರಿಗಳು, ಕೆಟ್ಟ ಆಡಳಿತಗಾರರಿಗೆ ಅವರ ಬರಹ ದುಸ್ವಪ್ನವಾಗಿತ್ತು. ಅವರ ಲೇಖನಿಯಿಂದ ಮೂಡಿದ ಕಸ್ತೂರಿ ರಂಗನ್ ವರದಿಯ ಸಾಧ್ಯಾಸಾಧ್ಯತೆಗಳು, ಕಾಡಾನೆ-ಮಾನವ ಸಂಘರ್ಷ ಸೇರಿದಂತೆ ಹಲ ವರದಿಗಳು ನಿರ್ಭೀತಿಯಿಂದ ಕೂಡಿತ್ತೆಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ತಾವು ನಂಬಿದ ಸಿದ್ಧಾಂತಕ್ಕೆ ಬದ್ಧವಾಗಿ ಮನು ಶೆಣೈ ಅವರು ಯಾವುದೇ ಟೀಕೆಗಳಿಗೆ ಜಗ್ಗದೆ ನಿಷ್ಟೂರವಾಗಿ, ನಿರ್ಭೀತಿಯಿಂದ ಪತ್ರಿಕೆಯನ್ನು ನಡೆಸಿದ ಚೇತನ. ಅವರ ಚಿಂತನೆಗಳು, ಆದರ್ಶಗಳು ಯುವ ಪೀಳಿಗೆಗೆ ಅತ್ಯವಶ್ಯಕ. ಈ ಹಿನ್ನೆಲೆ ಕೊಡಗು ಪತ್ರಕರ್ತರ ಸಂಘದಿಂದ ಬಿ.ಎನ್.ಮನುಶೆಣೈ ಅವರ ಹೆಸರಿನ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರು.
ಕೊಡಗು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ಅವರ ಒಡನಾಟವನ್ನು ಮೆಲುಕು ಹಾಕಿ, ಅವರ ನೆನಪು ನಮ್ಮೆಲ್ಲರ ಮನಸಿನಲ್ಲಿ ಸದಾಹಸಿರಾಗಿದೆಯೆಂದು ತಿಳಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಟ್ರಸ್ಟಿ ಅನಿಲ್ ಎಚ್.ಟಿ. ಮಾತನಾಡಿ, ಅಲೆಯ ವಿರುದ್ಧವಾಗಿ ಈಜು ಸುಲಭ ಸಾಧ್ಯವಲ್ಲ. ಹಲ ವಿಚಾರಗಳಲ್ಲಿ ತಮ್ಮ ಪತ್ರಿಕಾ ಕ್ಷೇತ್ರದ ನಿಲುವಿಗೆ ಅನುಗುಣವಾಗಿ ಮನು ಶೆಣೈ ಅವರು ಅಲೆಯ ವಿರುದ್ಧವಾಗಿ ಪತ್ರಿಕೆಯನ್ನು ಹೊರ ತರುವ ಮೂಲಕ ರಾಜಿ ಇಲ್ಲದೆ ಪತ್ರಿಕೋದ್ಯಮ ಮಾಡಿದವರು. ಅವರು ಪ್ರತಿಯೊಂದು ವಿಚಾರವನ್ನು ದಾಖಲೆಗಳ ಸಹಿತ ಮುಂದಿಡುತ್ತಿದ್ದ ಪತ್ರಕರ್ತ. ಇಂತಹ ಮನು ಶೆಣೈ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಯೋಜನೆ ರೂಪಿಸಬೇಕಾಗಿದೆ ಎಂದರು.
ಹಿರಿಯ ಪತ್ರಕರ್ತ ಶ್ರೀಧರ ನೆಲ್ಲಿತ್ತಾಯ ಅವರು, ಮನು ಶೆಣೈ ಅವರು ಸಮಾಜದ ಅಂಕು ಡೊಂಕುಗಳನ್ನು ನಿಷ್ಟೂರವಾಗಿ ತಮ್ಮ ಪತ್ರಕೆಯ ಮೂಲಕ ತೆರೆದಿಟ್ಟ ಧೀಮಂತ ಪತ್ರಕರ್ತರೆಂದು ಅಭಿಪ್ರಾಯಿಸಿದರು.
ಸಮಾಜ ಸೇವಕ ವಿ.ಪಿ.ಶಶಿಧರ್ ಮಾತನಾಡಿ, ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಎಗ್ಗಿಲ್ಲದೆ, ಅಂಜಿಕೆ ಇಲ್ಲದೆ ಬರೆದ ಪತ್ರಕರ್ತ ಮನು ಶೆಣೈ ಅವರಾಗಿದ್ದಾರೆ. ಅವರ ಹೆಸರನ್ನು ಶಾಶ್ವತವಾಗಿಸುವ ಕಾರ್ಯವಾಗಬೇಕೆಂದು ತಿಳಿಸಿದರು. ವಕೀಲ ಕೆ.ಆರ್. ವಿದ್ಯಾಧರ್, ಮನು ಶೆಣೈ ಅವರು ನಡೆಸಿಕೊಂಡು ಬಂದ ‘ಕೊಡಗು ಸಮಾಚಾರ’ ಪತ್ರಿಕೆಯನ್ನು ಅವರ ವೈಚಾರಿಕ ನಿಲುವು ಚಿಂತನೆಗಳಂತೆ ಹೊರತರಲು ಆಸಕ್ತಿ ಇರುವವರು ಮುಂದೆ ಬರಬೇಕೆಂದು ಮನವಿ ಮಾಡಿದರು.
ವಿರಾಜಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ, ನಿವೃತ್ತ ಶಿಕ್ಷಕ ಅಬ್ದುಲ್ ಲತೀಫ್ ಅವರು ಮನು ಶೆಣೈ ಅವರ ಒಡನಾಟವನ್ನು ಸ್ಮರಿಸಿಕೊಂಡರಲ್ಲದೆ, ವಿರಾಜಪೇಟೆಯಲ್ಲಿ ಅವರ ನೆನಪಿನ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್, ತಮ್ಮ ವೃತ್ತಿ ಜೀವನದ ಉದ್ದಕ್ಕೂ ಯಾವುದೇ ಆಮಿಷಗಳಿಗೆ ಒಳಗಾಗದೆ ಮನು ಶೆಣೈ ಅವರು ಪತ್ರಿಕೆಯನ್ನು ಹೊರ ತಂದಿದ್ದಾರೆ. ಅವರ ಹೆಸರಿನಲ್ಲಿ ಜಿಲ್ಲಾ ಕಸಾಪದಲ್ಲಿ ದತ್ತಿಯೊಂದನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ದಿ.ಮನುಶೈಣ್ಯ ಅವರ ಪುತ್ರ ಕಾರ್ತಿಕ್ ಶೆಣೈ ಮತ್ತು ಮಗಳು ನಮಿತಾ ಶೆಣೈ ಅವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಡಿ.ಹೆಚ್. ರಜತ್ ರಾಜ್ ಪ್ರಾರ್ಥಿಸಿ, ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಸ್ವಾಗತಿಸಿದರು. ಟ್ರಸ್ಟ್‍ನ ಖಜಾಂಚಿ ಕೆ.ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿ, ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ವಂದಿಸಿದರು.
Breaking News
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*
- *ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟನೆ : ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
- *ಭಾಗಮಂಡಲದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಗೌರವ ಸಮರ್ಪಣೆ*
- *ಬಲ್ಲಮಾವಟಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಡಾ.ಶೈಲಜಾ ಸಲಹೆ*