ನಾಪೋಕ್ಲು ಜೂ.27 : ನಾಪೋಕ್ಲು ಪೊಲೀಸ್ ಠಾಣೆ ವತಿಯಿಂದ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆ, ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಾದಕ ವ್ಯಸನಿ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ಪ್ರಯುಕ್ತ ನಾಪೋಕ್ಲು ಪಟ್ಟಣದಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ನಾಪೋಕ್ಲು ಮಾರುಕಟ್ಟೆ ಬಳಿಯಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾಥಾ ನಡೆಸಿದ ವಿದ್ಯಾರ್ಥಿಗಳು ಹಾಗೂ ಪೊಲೀಸರು ವಿವಿಧ ಘೋಷ ವಾಕ್ಯಗಳೊಂದಿಗೆ ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಮಾದಕ ವ್ಯಸನಿಗಳಿಗೆ, ಮಾದಕ ವಸ್ತು ಸಾಗಣೆ ಮಾಡುವವರ, ಬೆಳೆಯುವವರ ವಿರುದ್ಧ ಎಚ್ಚರಿಕೆ ಹಾಗೂ ಸೇವನೆ ಮಾಡುವವವರ ವಿರುದ್ಧ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ.
ನಮ್ಮ ದೇಶದ ಆರೋಗ್ಯ ಇಲಾಖೆ ವರದಿಯ ಮಾಹಿತಿ ಪ್ರಕಾರ 2022 ರಲ್ಲಿ
ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ.40ರಷ್ಟು ಜನ ಮಾದಕ ವ್ಯಸನಿಗಳಾಗಿದ್ದಾರೆ. ಇದರಲ್ಲಿ ತಂಬಾಕು, ಮದ್ಯ, ಗಾಂಜಾ, ಆಫೀಮು, ಎಂಡಿಎಂ ಒಳಪಟ್ಟಿದೆ. ನಮ್ಮ ವ್ಯಾಪ್ತಿಯಲ್ಲಿ ಗಾಂಜಾವನ್ನು ಮಾರಾಟ ಮಾರುವವರಿದ್ದಾರೆ. ಬೆಳೆಯುವವರಿದ್ದಾರೆ., ಅಂತವರಿಗೆ ಸಹಕರಿಸುವವವರೂ ಇದ್ದಾರೆ. ಕೂಡಲೇ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
ಉತ್ತಮ ಸಮಾಜ ನಿರ್ಮಾಣ ಮಾಡಲು ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸಬೇಕು. ಎಷ್ಟೇ ಪ್ರಭಾವ ಶಾಲಿ ವ್ಯಕ್ತಿಯಾದರೂ ಈ ವಿಚಾರದಲ್ಲಿ ಅಂತವರನ್ನು ಮಟ್ಟ ಹಾಕಲು ನಾನು ಸದಾ ಸಿದ್ದನಿದ್ದೇನೆ ಎಂದರು.
ನಾಪೋಕ್ಲು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಕಾವೇರಿ ಮಾತನಾಡಿ, ಇವತ್ತಿನ ದಿನಗಳಲ್ಲಿ ಹೆಚ್ಚು ಗಾಂಜಾ, ಮಧ್ಯ, ಆಫೀಮು ಮುಂತಾದವುಗಳ ಸೇವನೆಗೆ ಹದಿಹರಿಯದವರು ಬಲಿಯಾಗುತ್ತಿದ್ದಾರೆ. ಇದರ ಬಳಕೆಯಿಂದ ಏಕಾಗ್ರತೆ ಕಳೆದುಕೊಂಡು ಹಲವಾರು ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಒಳಗಾಗುತ್ತಿದ್ದಾರೆ. ವಿಶೇಷವಾಗಿ ಪೋಷಕರು ಈ ಜಾಗೃತಿ ಕಾರ್ಯಕ್ರಮವನ್ನು ನೋಡಿಕೊಂಡು ಎಚ್ಚೆತ್ತು ಕೊಳ್ಳಬೇಕು. ನಮ್ಮ ಜೊತೆ ಪೋಷಕರು ಕೂಡ ಕೈಜೋಡಿಸಿದರೆ ಇದನ್ನು ಬುಡ ಸಮೇತ ಕಿತ್ತೊಗೆಯಬವುದು ಎಂದರು.
ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಉಪ ಪ್ರಾಂಶುಪಾಲ ಎನ್.ಎಸ್. ಶಿವಣ್ಣ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ವಾಗಬೇಕಾದರೆ ಇಂತಹ ಜಾಥಾಗಳು ಆಯೋಜನೆಯಾಗಬೇಕು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸುವಂತೆ ಕೋರಿದರು.
ಈ ಸಂದರ್ಭ ನಾಪೋಕ್ಲು ಠಾಣೆಯ ಸಿಬ್ಬಂದಿಗಳು, ಶಾಲೆಯ ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು








