ಮಡಿಕೇರಿ ಜೂ.27 : ಕೊಳೆತ ಸ್ಥಿತಿಯಲ್ಲಿ ಕಾಡಾನೆಯೊಂದರ ಮೃತದೇಹ ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿ ಬೆಟ್ಟದಕಾಡು ಗ್ರಾಮದ ಕಾಫಿ ತೋಟವೊಂದರಲ್ಲಿ ಕಂಡು ಬಂದಿದೆ.
ಬೆಟ್ಟದಕಾಡು ಸಮೀಪದ ಸಂಪಿಗೆಕೊಲ್ಲಿ ಎಂಬಲ್ಲಿ ಕಾಫಿ ತೋಟದಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿದೆ. ಸುಮಾರು ಇಪ್ಪತ್ತು ದಿನಗಳ ಹಿಂದೆಯೇ ಕಾಡಾನೆ ಮೃತಪಟ್ಟಿದೆ ಎಂದು ಅಂದಾಜಿಸಲಾಗಿದೆ.
ತೋಟಕ್ಕೆ ತೆರಳಿದ್ದ ಕಾರ್ಮಿಕರು ಕಾಡಾನೆಯ ಕಳೇಬರ ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಮತ್ತು ವನ್ಯಜೀವಿ ವೈದ್ಯಾಧಿಕಾರಿ ಡಾ. ಚೆಟ್ಟಿಯಪ್ಪ ಕಳೇಬರದ ಮಹಜರು ಮಾಡಿ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭ ಮೃತ ಹೆಣ್ಣಾನೆ 15 ವರ್ಷ ಪ್ರಾಯದ್ದಾಗಿರಬಹುದು ಎಂದು ಅಂದಾಜಿಸಿದ್ದಾರೆ. ಕಾಡಾನೆಗಳ ನಡುವಿನ ಕಾದಾಟದಲ್ಲಿ ಗಾಯಗೊಂಡ ಆನೆ ಸಾವನ್ನಪ್ಪಿರ ಬಹುದೆಂದು ಊಹಿಸಲಾಗಿದೆ.
ಸ್ಥಳದಲ್ಲೇ ಜೆಸಿಬಿ ಯಂತ್ರ ಬಳಸಿ ಗುಂಡಿ ತೋಡಿ ಆನೆಯ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಘಟನಾ ಸ್ಥಳದಲ್ಲಿ ಕುಶಾಲನಗರ ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಸುಬ್ರಾಯ, ರವಿ ಯತ್ನಾಳ್, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಹಾಜರಿದ್ದರು.









