ನಾಪೋಕ್ಲು ಜೂ.29 : ಕಲ್ಪನೆಗಳಿಗೆ ಸೃಜನಶೀಲತೆಯ ಅಕ್ಷರ ಸೇರಿಸಿದಾಗ ಕಾವ್ಯವಾಗುತ್ತದೆ. ಕಾವ್ಯ ಮನೋವಿಕಾಸಕ್ಕೆ ಕಾರಣವಾಗುತ್ತದೆ ಎಂದು ಮಡಿಕೇರಿ ಮೆಡಿಕಲ್ ಕಾಲೇಜು ನಿವೃತ್ತ ಆಡಳಿತ ಅಧಿಕಾರಿ ಬಿದ್ದಾಟಂಡ ಮೇರಿ ನಾಣಯ್ಯ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ನಡೆದ “ಮಳೆಗಾಲದ ಕವಿಗೋಷ್ಠಿ” ಸಮಾರಂಭವನ್ನು ಜ್ಯೋತಿ ಬೆಳಗಿಸಿ ಕವನ ವಾಚಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಶ್ರೇಯಸ್ಸನ್ನು ಕಾಣುವಂತಾಗಬೇಕೆಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುದಿಯ ನೆರವನ ರೇವತಿ ರಮೇಶ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಜಿಲ್ಲೆಯಲ್ಲಿ ಮಹಿಳಾ ಬರಹಗಾರರು ವಿರಳವಾಗಿದ್ದು, ಮಹಿಳೆಯರನ್ನು ಸಾಹಿತ್ಯ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿ ಗುರುತಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘವನ್ನು ಕಟ್ಟಲಾಯಿತು ಪ್ರತಿ ತಿಂಗಳು ಸಂಘದ ವತಿಯಿಂದ ಸಾಹಿತ್ಯ ಬರವಣಿಗೆ ಇಂತಹ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲೆಡೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ಕಾವ್ಯ ಹರವನ್ನು ವಿವರಿಸುತ್ತಾ ಜಯಂತ್ ಕಾಯ್ಕಿಣಿ ಕಾವ್ಯದ ಬಗ್ಗೆ ಉಲ್ಲೇಖಿಸಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ ವಿದ್ಯಾರ್ಥಿಗಳಿಗೆ ಕವನವಾಚಿಸುವ ರೀತಿ ನೀತಿಗಳ ಬಗ್ಗೆ ಕಿವಿಮಾತು ಹೇಳಿದರು.
ಕಾಲೇಜು ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಸ್ಪರ್ಧೆ ಏರ್ಪಡಿಸಲಾಗಿ ಸುಮಾರು 14 ವಿದ್ಯಾರ್ಥಿಗಳು, ಕಾಲೇಜಿನ ಬೋಧಕರು ಕವನ ವಾಚಿಸಿದರು.
ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಸೇರಿದಂತೆ ಬಳಗದ ಮಾಜಿ ಅಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ ಕವನ ವಾಚಿಸಿ ಸಂಭ್ರಮಿಸಿದರು . ಸಂಘದ ನಿರ್ದೇಶಕರಾದ ಕಡ್ಲೆರ ತುಳಸಿ ಮೋಹನ್ ಅವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು . ಈ ಸಂದರ್ಭ ಬಳಗದ ನಿರ್ದೇಶಕರಾದ ತೆನ್ನೀರ ರಾಧ ಪೊನ್ನಪ್ಪ, ಕೂಪದಿರ ಸುಂದರಿ ಮಾಚಯ್ಯ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕವನವಾಚಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಬಳಗದ ನಿರ್ದೇಶಕಿ ಚೊಕ್ಕಾಡಿ ಪ್ರೇಮ ರಾಘವಯ್ಯ ಪ್ರಾರ್ಥಿಸಿ ಡಾ. ಕಾವೇರಿ ಪ್ರಕಾಶ್ ಸ್ವಾಗತಿಸಿ ವಿದ್ಯಾರ್ಥಿನಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಕೆ.ಆರ್.ಸೀತಮ್ಮ ವಂದಿಸಿದರು.
ವರದಿ : ದುಗ್ಗಳ ಸದಾನಂದ