ಸುಂಟಿಕೊಪ್ಪ,ಜೂ.30 : ಏಳು ಗ್ರಾ.ಪಂ ಗಳನ್ನು ಒಳಗೊಂಡು ಸುಮಾರು 25 ಸಾವಿರ ಜನ ಸಂಖ್ಯೆಗೆ ಆಧಾರವಾಗಿರುವ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರದ ನಿಯಮಗಳ ಅಡಿಯಲ್ಲಿ ಮೇಲ್ದರ್ಜೆಗೇರಿಸಲು ಆದ್ಯತೆ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಡಾ.ಮಂಥರ್‍ಗೌಡ ಭರವಸೆ ನೀಡಿದರು.
ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕರು ಆಸ್ಪತ್ರೆಯ ಆವರಣ ಸುತ್ತು ಪರಿಶೀಲಿಸಿ, ವೈದ್ಯಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭ ಆಸ್ಪತ್ರೆಯ ಹಿಂಭಾಗದಲ್ಲಿ ಬೆಳೆದು ನಿಂತಿರುವ ಕಾಡುಗಿಡ ಗಂಟಿಗಳನ್ನು ತೆಗೆಯುವಂತೆ ಸೂಚಿಸಿದರಲ್ಲದೆ 3 ದಿನಗಳ ಗಡವು ನೀಡಿ, ಜನರ ಆರೋಗ್ಯ ಕಾಪಾಡಬೇಕಿರುವ ಆರೋಗ್ಯ ಕೇಂದ್ರ ಹೀಗಿರುವುದು ಎಷ್ಟು ಸರಿಯೆಂದು ಅಸಾಮಾಧಾನ ವ್ಯಕ್ತಪಡಿಸಿದರು.
ಸ್ವತಃ ವೈದ್ಯರಾಗಿರುವ ಶಾಸಕ ಡಾ.ಮಂಥರ್ ಗೌಡ ಆಸ್ಪತ್ರೆಯಲ್ಲಿನ ಹೊರರೋಗಿಗಳು ಮತ್ತು ಒಳ ರೋಗಿಗಳನ್ನು ಮಾತನಾಡಿಸಿ, ಅವರಲ್ಲಿ ಜ್ವರದಿಂದ ಬಳಲುತ್ತಿರುವವರ ಸ್ಥಿತಿ ಗತಿ ಏನೆಂಬುದನ್ನು ತಿಳಿದರು.
ಇದೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಅನಾರೋಗ್ಯ ಇರುವುದರ ಕುರಿತು ಮಾಹಿತಿ ಪಡೆದು, ಆರೋಗ್ಯ ಕೇಂದ್ರ ಅಶುಚಿತ್ವ ಕುರಿತು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಯನ್ನು ದೂರವಾಣಿ ಮೂಲಕ ಕಟುವಾಗಿ ಪ್ರಶ್ನಿಸಿದರು.
ಈ ಪ್ರಾಥಮಿಕ ಆರೋಗ್ಯ ಕೇಂದವು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದು ನಿತ್ಯ ಅಪಘಾತಗಳು ಇನ್ನಿತರ ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಸೇರಿದಂತೆ ಯಾವುದೆ ತುರ್ತು ಸೇವೆಗಳು ಲಭ್ಯವಾಗುವುದಿಲ್ಲ ಇದರಿಂದ ಈ ಭಾಗದಲ್ಲಿ ತೋಟದ ಕೂಲಿ ಕಾರ್ಮಿಕರು ಕೆಲವು ಮಧ್ಯಮ ವರ್ಗದ ಜನತೆ ತುಂಬಾ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಜಿ.ಪಂ. ಮಾಜಿಸದಸ್ಯ ಪಿ.ಎಂ.ಲತೀಫ್ ಗ್ರಾ.ಪಂ ಸದಸ್ಯರಾದ ಪಿ.ಎಫ್.ಸಬಾಸ್ಟೀನ್ ರಫೀಕ್‍ಖಾನ್ ಶಾಸಕರ ಗಮನ ಸಳೆದರು.
ಇದೇ ಸಂದರ್ಭ ಆಸ್ಪತ್ರೆಯ ಒಳಗೂ ಕೂಡ ಸೊಳ್ಳೆಗಳು ಕಂಡು ಬಂದ ಹಿನ್ನಲೆಯಲ್ಲಿ ಸೊಳ್ಳೆ ನಿರೋಧಕ ಬತ್ತಿಗಳನ್ನು ತಂದು ಉರಿಸುವಂತೆ ಶಾಸಕರು ಸೂಚಿಸಿದರು.
ಆರೋಗ್ಯ ಕೇಂದ್ರದ ಆವರಣದಲ್ಲಿ ಹಳೆಯ ಮತ್ತು ಶೀಥಿಲಾವಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರದ ಗಮನ ಸಳೆದು ಕ್ರಮಕೈಗೊಳ್ಳುವುದಾಗಿ ಡಾ. ಮಂಥರ್‍ಗೌಡ ಭರವಸೆ ನೀಡಿದರು.
ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಧೈರ್ಯ ತುಂಬಿ ಮಾತನಾಡಿದ ಶಾಸಕರು ಎಚ್ಚರಿಕೆ ಹಾಗೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಜನಮಾನಸದಲ್ಲಿ ಉಳಿಯುವಂತೆ ಕಿವಿಮಾತು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವೀಂದ್ರ, ದಾದಿ ಹಾಗೂ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಪಿ.ಎಫ್.ಸಬಾಸ್ಟೀನ್ ಹಾಗೂ ರಫೀಕ್‍ಖಾನ್ ಅವರು ಸುಂಟಿಕೊಪ್ಪ ಪಟ್ಟಣ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಓಣ ಮಮತ್ತು ಹಸಿಕಸ ಸೇರಿದಂತೆ ಒಟ್ಟು ಕಸವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಕಸ ಸಂಗ್ರಹ ವಾಹನಗಳು ಕೆಟ್ಟು ನಿಂತಿರುವುದು ಇದಕ್ಕೆ ಕಾರಣವಾಗಿದ್ದು, ಪಟ್ಟಣದ ಕೆಲವು ವಾರ್ಡ್‍ಗಳಲ್ಲಿ ಕಸವಿಲೇವಾರಿಯಾಗುತ್ತಿಲ್ಲ ಎಂಬ ಅಂಶವನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳು ಭೇಟಿಯ ಸಂದರ್ಭ ವಾಹನವನ್ನು ಸದುಪಯೋಗಕ್ಕೆ ಯೋಗ್ಯ ಇಲ್ಲವೆಂದು ದೃಢೀಕರಣ ಪತ್ರ ಒದಗಿಸಿದ್ದಲ್ಲಿ ನೂತನ ವಾಹನ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಶಾಸಕರ ಗಮನಕ್ಕೆ ತಂದರು. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.