ಮಡಿಕೇರಿ ಜು.3 : ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ದ್ವಿತೀಯ ಪಿ.ಯು.ಸಿ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಬರಲು ಕಾರಣರಾದ ಶಿಕ್ಷಕರಿಗೆ ಸನ್ಮಾನ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನಿಸಿ ಮಾತನಾಡಿದರು.
ಸಮಾಜದಲ್ಲಿ ಇಂದು ಜನರು ಯಾವುದೇ ಕಟ್ಟುಪಾಡುಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನ. ನಮ್ಮ ಬದುಕಿನಲ್ಲಿ ಸಂವಿಧಾನ ಬಹಳಷ್ಟು ಮುಖ್ಯವಾಗಿದ್ದು, ಜನಪ್ರತಿನಿಧಿಯಾಗಿ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಜೊತೆಯಾಗಿರುತ್ತೇನೆ ಎಂದು ಭರವಸೆ ನೀಡಿದರು.
ದೀಪಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ
ಸುಂದರರಾಜ್, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು, ಜೀವನದಲ್ಲಿ ಸಾಧನೆ ಮಾಡಬೇಕೆಂದರೆ ಶಿಕ್ಷಕರ ಮಾರ್ಗದರ್ಶನ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ, ಡಿ.ಎಸ್.ಎಸ್ ಮಾಡಿರುವ ಸಮಾಜ ಸೇವೆಯ ವಿವರ ಹಾಗೂ ಕಳೆದ ಬಹಳಷ್ಟು ವರ್ಷಗಳಿಂದ ಸರಕಾರಿ ಶಾಲೆಯ ಶಿಕ್ಷಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಸುತ್ತಿರುವುದನ್ನು ಪ್ರಸ್ತಾಪಿಸಿದರು.
ಮಕ್ಕಳ ವಿಭಾಗದ ವೈದ್ಯಾಧಿಕಾರಿ ಡಾ.ಪುರುಶೋತ್ತಮ್ ಮಾತನಾಡಿ, ಎಸ್ ಎಸ್ ಎಲ್ ಸಿ ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ. ನಮ್ಮ ಬದುಕಿಗೆ ಮುಖ್ಯ ತಿರುವನ್ನು ನೀಡುವ ಸಮಯ ಇದಾಗಿದ್ದು, ಶಿಕ್ಷಕರ ಮಾರ್ಗದರ್ಶನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ವಿಚಾರ ವಿನಿಮಯ ಮಾಡಿದರು.
ಸಮಾಜಸೇವಕ ವಾಸುದೇವ್ ಮಾತನಾಡಿ, ಸಾಧನೆ ಮಾಡಿದವರ ಮಾತುಗಳನ್ನು ಕೇಳಿದರೆ ನಮ್ಮ ಜೀವನಕ್ಕೆ ಬೇಕಾದ ಉಪಯುಕ್ತ ಅಂಶಗಳು ಸಿಗುತ್ತವೆ. ಒಬ್ಬ ವ್ಯಕ್ತಿ ಉನ್ನತ ಸ್ಥಾನವನ್ನು ಏರಬೇಕೆಂದರೆ ಅದಕ್ಕೆ ಮುಖ್ಯ ಕಾರಣ ಶಿಕ್ಷಕರು. ಅವರನ್ನು ಗೌರವಿಸುವ ಡಿ.ಎಸ್.ಎಸ್ ನ ಕಾರ್ಯ ಪ್ರಶಂಸನೀಯವಾಗಿದೆ ಎಂದರು.
ಪ್ರಸೂತಿ ವೈದ್ಯೆ ಡಾ.ಸೌಮ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು, ಆ ಗುರಿಯನ್ನು ಬೆನ್ನತ್ತಿ ಹೋಗಲು ಶಿಕ್ಷಕರು ನೆರವಾಗುತ್ತಾರೆ. ವಿದ್ಯಾರ್ಥಿಗಳು ಗಟ್ಟಿ ನಿಲುವನ್ನು ಬೆಳೆಸಿಕೊಳ್ಳಬೇಕೆಂದರು.
ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬಂತೆ ಶಿಕ್ಷಕ ವೃತ್ತಿಗೆ ಬಹಳ ಗೌರವ ಇದೆ, ವ್ಯಕ್ತಿಯೊಬ್ಬನನ್ನು ಉನ್ನತ ಹುದ್ದೆಗೇರಿಸುವ ಸಾಮರ್ಥ್ಯ ಇರುವುದು ಶಿಕ್ಷಕರಿಗೆ. ಆದರೆ ಶಿಕ್ಷಕರು ಮಾತ್ರ ಮತ್ತಷ್ಟು ವಿದ್ಯಾರ್ಥಿಗಳನ್ನು ದೇಶಕ್ಕೆ ಕೊಡುಗೆ ನೀಡುವಲ್ಲಿ ಶ್ರಮಿಸುತ್ತಿರುತ್ತಾರೆ ಎಂದು ಶಿಕ್ಷಕರ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಹೆಚ್.ವಿ.ದೇವದಾಸ್ ಮಾತನಾಡಿ, ದಿವಾಕರ್ ನೇತೃತ್ವದ ಡಿ ಎಸ್ ಎಸ್ ಕೊಡಗಿನಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಚಾರ ಇವರ ಈ ಕಾರ್ಯಕ್ರಮಗಳಿಗೆ ವೈದ್ಯಕೀಯ ಇಲಾಖೆಯಿಂದ ಸೂಕ್ತ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್ ವಿಭಾಗೀಯ ಸಂಚಾಲಕ ವೀರಭದ್ರಯ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್, ಚಂದ್ರಶೇಖರ್, ಪಿ.ಕೆ.ನಳಿನಿ , ಲೋಕನಾಥ್ ಉಪಸ್ಥಿತರಿದ್ದರು.
ಪ್ರಮುಖರಾದ ಹೆಚ್.ಎನ್.ಶೃತಿ ಸ್ವಾಗತಿಸಿ, ನಿರೂಪಿಸಿದರು.