ಮಡಿಕೇರಿ ಆ.25 : ಧರ್ಮಸ್ಥಳ ವ್ಯಾಪ್ತಿಯಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ ‘ಸೌಜನ್ಯ’ ಹತ್ಯಾ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್‍ನಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಕೊಡಗು ಜಿಲ್ಲಾ ಯುವ ಕಾಂಗ್ರೆಸ್, ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಮತ್ತು ಮಡಿಕೇರಿ ನಗರ ಯುವ ಕಾಂಗ್ರೆಸ್ ಸಂಯುಕ್ತಾಶ್ರಯದಲ್ಲಿ ಪಕ್ಷದ ಪ್ರಮುಖರು ಮತ್ತು ಸದಸ್ಯರು, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಮಾವೇಶಗೊಂಡು, ಘೋಷಣೆಗಳ ಸಹಿತ ಪ್ರತಿಭಟನೆ ನಡೆಸಿ, ಸೌಜನ್ಯ ಹತ್ಯಾ ಪ್ರಕರಣದ ಮರು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಪೂಣಚ್ಚ ಮಾತನಾಡಿ, ಕಳೆದ ಹನ್ನೊಂದು ವರ್ಷಗಳ ಹಿಂದೆ ಸೌಜನ್ಯಳನ್ನು ಅತ್ಯಾಚಾರಗೈದು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಸಂತೋಷ್ ಎಂಬಾತನನ್ನು ಬಂಧಿಸಲಾಗಿತ್ತಾದರು, ಸಿಬಿಐ ನ್ಯಾಯಾಲಯ ಆತನನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಿದೆ. ಈ ಹಿನ್ನೆಲೆ ಪ್ರಕರಣದ ನೈಜ ಆರೋಪಿಗಳನ್ನು ಕಂಡು ಹಿಡಿಯಲು ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ಅಮಾಯಕ ಹೆಣ್ಣು ಮಗಳ ಹತ್ಯೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲೇಬೇಕು. ಇಷ್ಟು ವರ್ಷಗಳಾದರು ವಿದ್ಯಾರ್ಥಿನಿ ಸೌಜನ್ಯಳ ಸಾವಿಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸದೆ ಇರುವುದು ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ದುಷ್ಕೃತ್ಯವೆಸಗಿದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಾಂಗ್ರೆಸ್ ವಕ್ತಾರ ತೆನ್ನಿರ ಮೈನ ಮಾತನಾಡಿ, ಹನ್ನೊಂದು ವರ್ಷಗಳ ಹಿಂದೆ ಸೌಜನ್ಯ ಹತ್ಯೆ ನಡೆದ ಬಳಿಕ ಅಂದಿನ ಸರ್ಕಾರ ತನಿಖೆಯ ಹಾದಿಯನ್ನು ತಪ್ಪಿಸಿತೆಂದು ಆರೋಪಿಸಿ, ಅಂದು ಸಿಐಡಿ ತನಿಖೆಯ ಬಳಿಕ ಸಿಬಿಐ ತನಿಖೆ ನಡೆದಿತ್ತಾದರು, ಸೌಜನ್ಯ ಸಾವಿಗೆ ನ್ಯಾಯ ದೊರಕಿಲ್ಲ. ಈ ಹಿನ್ನೆಲೆ ಒಟ್ಟು ಪ್ರಕರಣದ ಮರು ತನಿಖೆಗೆ ಆಗ್ರಹಿಸಲಾಗುತ್ತಿದೆಯೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಡಿಕೇರಿ ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಮಡಿಕೇರಿ ನಗರಸಭಾ ಸದಸ್ಯ ಬಿ.ವೈ.ರಾಜೇಶ್ , ಪಕ್ಷದ ಪ್ರಮುಖರಾದ ಕೊಟ್ಟಮುಡಿ ಹಂಸ, ಕೆ.ಜಿ.ಪೀಟರ್, ಜುಲೇಕಾಬಿ, ಸದಾ ಮುದ್ದಪ್ಪ, ಪುಷ್ಪ ಪೂಣಚ್ಚ, ಚಂದ್ರಶೇಖರ್ ಸೇರಿದಂತೆ ಹಲ ಪ್ರಮುಖರು ಪಾಲ್ಗೊಂಡಿದ್ದರು.