ಸಿದ್ದಾಪುರ ಆ.2 : ಶಾಂತಿ ಸಹಬಾಳ್ವೆಯ ಸಹೋದರತ್ವ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜ ಸುಧಾರಣೆ ಮೂಲಕ ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಾಧ್ಯವಾಗಲಿದ್ದು, ಶಿಕ್ಷಣದೊಂದಿಗೆ ಮುಖ್ಯವಾಹಿನಿಗೆ ಬರಬೇಕೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದಾಪುರದ ಸ್ವರ್ಣ ಮಾಲಾ ಸಭಾಂಗಣದಲ್ಲಿ ಶ್ರೀ ನಾರಾಯಣ ಗುರು ಪರಿಪಾಲನಾ ಯೋಗಂ ಜಿಲ್ಲಾ ಘಟಕದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 19ನೇ ಶತಮಾನದಲ್ಲಿ ನಾರಾಯಣ ಗುರುಗಳು ಪ್ರತಿಪಾದನೆ ಮಾಡಿದಂತ
ತತ್ವ ಸಿದ್ಧಾಂತ ಆದರ್ಶಗಳನ್ನ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಯೊಂದಿಗೆ ಮುನ್ನಡೆದಲ್ಲಿ ಇಂತಹ ಆಚರಣೆಗಳು ಯಶಸ್ಸು ಕಾಣಲು ಸಾಧ್ಯವಾಗಲಿದೆ.
ಕೊಡಗು ಜಿಲ್ಲೆಯಲ್ಲೂ ಎಸ್ ಎನ್ ಡಿ ಪಿ ಸಂಘಟನೆ ನಿರಂತರ ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೆಯ
ಇಂತಹ ಆಚರಣೆಗಳಿಗೆ ಹೆಚ್ಚು ಸಹಕಾರ ನೀಡುವ ಮೂಲಕ ಮತ್ತಷ್ಟು ಬಲಿಷ್ಠ ಸಂಘಟನೆಯಾಗಿ ಯುವ ಸಮೂಹಗಳಿಗೆ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನ ತಿಳಿಸುವ ಮೂಲಕ ಶಾಂತಿ ಸಹಬಾಳ್ವೆಯ ಸಹೋದರತ್ವದ ಜೀವನ ನಡೆಸುವಂತಾಗಲಿ ಎಂದರು.
ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಪ್ರಾಸ್ತಾವಿಕ ಮಾತನಾಡಿ ಎಸ್‌ಎನ್‌ಡಿಪಿ ಸಂಘಟನೆಯು ವಿವಿಧ ಜಿಲ್ಲೆಗಳಲ್ಲಿ ನೂರಾರು ಶಾಖೆಗಳನ್ನು ಹೊಂದಿದ್ದು, ಸಾವಿರಾರು ಮಂದಿ ಸದಸ್ಯತ್ವ ಹೊಂದಿದ್ದಾರೆ.
ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯದಲ್ಲಿ ಸಮಾಜಕ್ಕೆ ಬೆನ್ನೆಲುಬಾಗಿ ನಿಂತಿದೆ. ಯುವ ಜನತೆಗೆ ಮಾದರಿ ಯಾಗಬೇಕೆಂಬ ಉದ್ದೇಶದಿಂದ ದಾಂಪತ್ಯ ಜೀವನದ ಹಿರಿಯರು ಹಾಗೂ ಯುವಜನತೆ ದೇಶ ಸೇವೆಯತ್ತ ಗಮನ ಹರಿಸಬೇಕೆಂಬ ನಿಟ್ಟಿನಲ್ಲಿ ನಿವೃತ ಯೋಧರನ್ನು ಸನ್ಮಾನಿಸಲಾಗುತ್ತಿದೆ. ವಿದ್ಯೆಯೊಂದಿಗೆ ಎಲ್ಲರೂ ಪ್ರಬುದ್ಧರಾಗಬೇಕೆಂಬ ಗುರುಗಳ ಧ್ಯೇಯ್ಯ ವಾಕ್ಯದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಮಲಯಾಳಿ ಸಂಘದ ಅಧ್ಯಕ್ಷ ವಿ.ಎಂ. ವಿಜಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ, ಎಸ್ಎನ್‌ಡಿಪಿ ಕೊಡಗು ಯೂನಿಯನ್ ಉಪಾಧ್ಯಕ್ಷ ರಾಜನ್, ಪ್ರಮುಖರಾದ ಟಿ.ಆರ್. ಸೋಮನಾಥ್, ಟಿ. ಎಸ್. ಸಜೀವ, ರವಿ, ಪಾಪಯ್ಯ ಆಚರಣಾ ಸಮಿತಿ ಅಧ್ಯಕ್ಷ ಆರ್ ಗಿರೀಶ್, ಕಾರ್ಯದರ್ಶಿ ರೀಶಾ ಸುರೇಂದ್ರ ಸೇರಿದಂತೆ ವಿವಿಧ ಶಾಖೆಗಳ ಮುಖಂಡರುಗಳು ಹಾಜರಿದ್ದರು.
ಮೆರವಣಿಗೆ :: ಆಚರಣೆಯ ಅಂಗವಾಗಿ ಇಡೀ ಗ್ರಾಮವೇ ನಾರಾಯಣ ಗುರುಗಳ ಸಂದೇಶ ಸಾರುವ ಧ್ವಜಗಳೊಂದಿಗೆ ಶೃಂಗಾರಗೊಂಡಿತ್ತು. ಸಾಂಪ್ರದಾಯಿಕ ಉಡುಗೆ ತೊಟ್ಟ ವಿವಿಧ ಶಾಖೆಗಳ ಪುರುಷರು ಹಾಗೂ ಸಾವಿರಾರು ಮಹಿಳೆಯರು ಕಳಸ ಹಿಡಿದು, ಚಂಡೆ ವಾದ್ಯಗಳೊಂದಿಗೆ ಶ್ರೀ ನಾರಾಯಣ ಗುರುಮೂರ್ತಿಯನ್ನು ಅಲಂಕೃತ ಮಂಟಪದೊದಿಗೆ ಕಲಾತಂಡದೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ತರಲಾಯಿತು.
ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ : : ಕೇರಳದ ಸೂರ್ಯ ಕಮ್ಯೂನಿಕೇಷನ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದವರ ಗಮನ ಸೆಳೆಯಿತು.
ಸಮಾರೋಪ ಸಮಾರಂಭದಲ್ಲಿ ನಿವೃತ್ತ ಯೋಧರು ಹಾಗೂ ಐವತ್ತು ವರ್ಷ ದಾಂಪತ್ಯ ಜೀವನ ಪೂರೈಸಿದ ದಂಪತಿಗಳು ಹಾಗೂ ಶಿಕ್ಷಣ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.