ಮಡಿಕೇರಿ ಸೆ.7 : ಮಹಾವೀರ ಚಕ್ರ ಪುರಸ್ಕೃತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪುಣ್ಯ ಸ್ಮರಣೆಯ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಪ್ರದಾನ ಮಾಡಲಾಯಿತು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಮತ್ತು ಕೊಡವ ಮಕ್ಕಡ ಕೂಟದ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಗ್ರೂಪ್ ಕ್ಯಾಪ್ಟನ್ ಕಂಬೇಯಂಡ ಅಯ್ಯಪ್ಪ ಕಾರ್ಯಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಎಂವಿಸಿ ಮರಣೋತ್ತರವಾಗಿ ಮಹಾವೀರ ಚಕ್ರ (ಎಂವಿಸಿ) ಪಡೆದ ಭಾರತೀಯ ವಾಯುಪಡೆಯ ಮೊದಲ ಅಧಿಕಾರಿ. ಭಾರತ-ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಹಾರುವ ಬೆಂಕಿ ಎಂಬ ಖ್ಯಾತಿ ಪಡೆದಿದ್ದರು. ಪಾಕಿಸ್ತಾನದ ಸರ್ಗೊಡ ವಾಯುನೆಲೆಯ ಮೇಲೆ ದಾಳಿ ನಡೆದ ಸಂದರ್ಭ ಅನುಮಾನಾಸ್ಪದವಾಗಿ ಕಣ್ಮರೆಯಾಗಿದ್ದರು.
ಆದರೆ ಹಲವು ವರ್ಷಗಳ ಬಳಿಕ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂತು. ದೇಶಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ದೇವಯ್ಯ ಅವರ ಸಾಹಸಗಾಥೆಯನ್ನು ಇಂದಿನ ಯುವ ಜನತೆ ತಿಳಿದುಕೊಳ್ಳಬೇಕು. ದೇವಯ್ಯ ಅವರು ಕೊಡಗಿನವರು ಎಂಬುವುದು ನಮ್ಮೆಗೆಲ್ಲರಿಗೂ ಹೆಮ್ಮೆ ಎಂದು ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮಾಥ್ಯು ಮಾತನಾಡಿ, ದೇಶವನ್ನು ರಕ್ಷಿಸುವ ಸೈನಿಕರು ಹಾಗೂ ವೀರ ಮರಣವನ್ನಪ್ಪಿದ ಹುತಾತ್ಮರ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ. ಮಕ್ಕಳು ಶಾಲೆಯ ಪಠ್ಯವನ್ನು ಮಾತ್ರವಲ್ಲದೇ ದೇಶಕ್ಕಾಗಿ ಸೇವೆ ಸಲ್ಲಿಸಿ ಬಲಿದಾನಗೈದವರ ವಿಚಾರಗಳನ್ನು ತಿಳಿದುಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಚರಿತ್ರೆಯನ್ನು ಕೇವಲ ಪುಸ್ತಕಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಅದನ್ನು ಓದಬೇಕು ಮತ್ತು ಸ್ವತಃ ಕೇಳುವಂತಾಗಬೇಕು ಎಂದ ಅವರು, ವೀರ ಸೇನಾನಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು.
ಕೊಡವ ಮಕ್ಕಡ ಕೂಟದ ವತಿಯಿಂದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ವಿದ್ಯಾರ್ಥಿಗಳಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಇದು ನಿರಂತರವಾಗಿ ನಡೆಯುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾ ರೈ ಮಾತನಾಡಿ, ಶಿಕ್ಷಕರೇ ಮಕ್ಕಳ ಬದುಕಿನ ಬುನಾದಿಯಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಅಡಿಪಾಯವನ್ನು ಹಾಕಿ ಕೊಡಬೇಕು ಎಂದರು. ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಶಿಸ್ತು, ಸಂಯಮ, ಸಮಯ ಪಾಲನೆಯನ್ನು ಕಲಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ದೊರಕುವ ಮಾರ್ಗದರ್ಶನ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಜೀವನವನ್ನು ಕಾಣಲು ಸಾಧ್ಯ ಎಂದರು.
ವೀರಸೇನಾನಿಗಳು ಹಾಗೂ ಆದರ್ಶ ವ್ಯಕ್ತಿಗಳ ಸೇವಾ ಮನೋಭಾವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸಂಸ್ಥೆಯ ಅಧ್ಯಕ್ಷ ಬಿ.ಎನ್.ರಮೇಶ್ ಮಾತನಾಡಿ, ಕೇವಲ ಗಾಳಿಯಿಂದ ಮಾತ್ರವಲ್ಲ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಉಸಿರಿನಿಂದ ಇಂದು ದೇಶದ ಧ್ವಜ ಹಾರಾಡುತ್ತಿದೆ. ಯಾವ ದೇಶ ಹುತಾತ್ಮಮರಾದವರನ್ನು ನೆನೆಯುದಿಲ್ಲವೋ ಆ ದೇಶಕ್ಕೆ ಭವಿಷ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ದೇಶದ ಅತ್ಯುನ್ನತ ಶ್ರೇಣಿಯ ಪರಮವೀರ ಚಕ್ರ ಪಡೆದವರು ಅತೀ ಕಡಿಮೆ. ಕೊಡಗಿನ ದೇವಯ್ಯ ಹಾಗೂ ಪುಟ್ಟಿಚಂಡ ಎಸ್ . ಗಣಪತಿ ಅವರಿಗೆ ಮಹಾವೀರ ಚಕ್ರ ಪ್ರಶಸ್ತಿ ದೊರೆತ್ತಿರುವುದು ಕೊಡಗಿನವರಾದ ನಮಗೆ ಹೆಮ್ಮೆ ಎನಿಸಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಪ್ರತೀ ಗ್ರಾ.ಪಂ ಗಳಲ್ಲಿ ಡಿಜಿಟಲ್ ಗ್ರಂಥಾಲಯಗಳಿದ್ದು, ವಿದ್ಯಾರ್ಥಿಗಳು ಪುಸ್ತಕ ಅಥವಾ ಆನ್‍ಲೈನ್ ಮೂಲಕ ಮಹಾನೀಯರ ಮಾಹಿತಿಯನ್ನು ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸೆ.16 ರಂದು ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.
ದೇಶಕ್ಕಾಗಿ ಬಲಿದಾನಗೈದ ಯೋಧರು ಸದಾ ಪ್ರೇರಣೆಯಾಗಿದ್ದಾರೆ. ಅಂತವರನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪರಿಚಯ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ, ನಾವೆಲ್ಲರೂ ನೆಮ್ಮದಿಯಿಂದ ಬದುಕಲು ರಕ್ಷಣಾ ಪಡೆಯೇ ಮುಖ್ಯ ಕಾರಣವಾಗಿದೆ. ರಕ್ಷಣಾ ಪಡೆಗೆ ಹೆಚ್ಚು ಮಹತ್ವ ನೀಡಬೇಕು, ಯೋಧರ ಬಲಿದಾನವನ್ನು ಸದಾ ಸ್ಮರಿಸಬೇಕು. ದೇಶದ ಅಭ್ಯುದಯಕ್ಕೆ ಕಂಕಣ ಬದ್ದರಾಗಬೇಕು ಎಂದು ಕರೆ ನೀಡಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮಡಿಕೇರಿ ಸಮಿತಿ ಕಾರ್ಯದರ್ಶಿ ಅಜ್ಜಮಕ್ಕಡ ವಿನುಕುಶಾಲಪ್ಪ ಪ್ರಾರ್ಥಿಸಿ, ಪತ್ರಕರ್ತ ಚಂದ್ರಮೋಹನ್ ಸ್ವಾಗತಿಸಿ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ನಿರೂಪಿಸಿ, ಪ್ರೆಸ್‍ಕ್ಲಬ್ ನಿರ್ದೇಶಕ ದಿವಾಕರ್ ವಂದಿಸಿದರು.
::: ಪ್ರಬಂಧ ಸ್ಪರ್ಧೆ ವಿಜೇತರು :::
ಪ್ರಬಂಧ ಸ್ಪರ್ಧೆಯಲ್ಲಿ ಸ್ಕೌಟ್ಸ್ ವಿಭಾಗದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಆರವ್ ಬೋಪಣ್ಣ ಪ್ರಥಮ, ಅರಮೇರಿ ಕಳಂಚೇರಿ ಶಾಲೆಯ ಕುನಲ್ ಪ್ರಸಾದ್ ದ್ವಿತೀಯ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಕೆ.ಎಸ್.ಶೋಬಿತ್ ತೃತೀಯ ಬಹುಮಾನ ಪಡೆದರು.
ಗೈಡ್ಸ್ ವಿಭಾಗದಲ್ಲಿ ಸಂತ ಮೈಕಲರ ಶಾಲೆಯ ಕೆ.ಎಲ್.ಸ್ನೇಹ ಪ್ರಥಮ, ಜನರಲ್ ತಿಮ್ಮಯ್ಯ ಶಾಲೆಯ ಜಶ್ಮೀರಾ ಬೋಪಣ್ಣ ದ್ವಿತೀಯ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಪಿ.ಲಕ್ಷ ದಿನೇಶ್ ತೃತೀಯ ಬಹುಮಾನ ಗಳಿಸಿದರು.
ಅತಿಥಿಗಳು ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ಅಲ್ಲದೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.