ಮಡಿಕೇರಿ ಸೆ.15 : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಮತ್ತು ಎನ್.ಎಸ್.ಎಸ್ ವಿಭಾಗದಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಒಟ್ಟಾಗಿ ಸಂವಿಧಾನದ ಪ್ರಸ್ತಾವನೆ/ಪೀಠಿಕೆಯನ್ನು ಓದುವ ಮೂಲಕ ನಮ್ಮ ಜೀವನದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆಂದು ಪ್ರತಿಜ್ಞೆ ಮಾಡಿದರು.
ಈ ಸಂದರ್ಭ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆರ್.ದಿವ್ಯ, 1997ರ ಸೆ.15ರಂದು ಇಂಟರ್ ಪಾರ್ಲಿಮಂಟರಿ ಯೂನಿಯನ್ (IPU) ಪ್ರಜಾಪ್ರಭುತ್ವದ ಸಾರ್ವತ್ರಿಕ ಘೋಷಣೆಯನ್ನು (Universal Declaration on Democracy) ಅಂಗೀಕರಿಸಿದ ಸವಿನೆನಪಿಗಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007 ನವೆಂಬರ್ 8 ರಂದು ನಿರ್ಣಯವನ್ನು ಅಂಗೀಕರಿಸಿ ಇನ್ನು ಮುಂದೆ ಪ್ರತೀ ವರ್ಷ ಸೆ.15ನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿ ಆಚರಿಸುವ ನಿರ್ಣಯ ಕೈಗೊಂಡರು. ಅದರಂತೆ 2008ರಿಂದ ಸೆಪ್ಟೆಂಬರ್ 15ನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿ ಆಚರಿಸುತ್ತಾ ಬಂದಿದ್ದು, ಈ ವರ್ಷದ ಘೋಷವಾಕ್ಯ “Empowering the Next Generation” ಎಂಬುದಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅರಿವು ಮೂಡಿಸಿ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಸದೃಢಗೊಳಿಸುವ ಸಲುವಾಗಿ ನಾವೆಲ್ಲರೂ ಈ ದಿನ ನಮ್ಮ ಸಂವಿಧಾನದ ಪ್ರಸ್ತಾವನೆಯನ್ನು (ಪೀಠಿಕೆ) ಓದುವ ಮೂಲಕ ನಮ್ಮ ಜೀವನದಲ್ಲಿ ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ತತ್ವಗಳನ್ನು ಅನುಸರಿಸಲು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಸಮಸ್ತ ಬೋಧಕ-ಬೋಧಕೇತರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.