ಮಡಿಕೇರಿ ಅ.30 : ಕೊಯವ ಸಮಾಜದ 18ನೇ ವಾರ್ಷಿಕ ಮಹಾಸಭೆ ಮತ್ತು ಕೈಲು ಮುಹೂರ್ತ ಸಂತೋಷ ಕೂಟ ಮೂರ್ನಾಡುವಿನಲ್ಲಿ ಸಂಭ್ರಮದಿಂದ ನಡೆಯಿತು.
ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಡಿ ಭದ್ರತಾ ಪಡೆಯ ನಿವೃತ್ತ ಅಧಿಕಾರಿ ಚೀಪಂಡ ಕಾರ್ಯಪ್ಪ, ಹಿರಿಯ ಸಹಕಾರಿ ಈರಮಂಡ ಸೋಮಣ್ಣ ಹಾಗೂ ಬಿಎಸ್‍ಎನ್‍ಎಲ್ ನ ನಿವೃತ್ತ ಅಧಿಕಾರಿ ಮುಕ್ಕಾಟಿರ ಪೂರ್ಣಿಮಾ ಪೂಣಚ್ಚ ಅವರುಗಳು ಸನ್ಮಾನ ಸ್ವೀಕರಿಸಿದರು.
ಚೀಪಂಡ ಕಾರ್ಯಪ್ಪ ಅವರು ಮಾತನಾಡಿ ಅವಕಾಶ ನಮಗಾಗಿ ಕಾಯುವುದಿಲ್ಲ, ಅವಕಾಶ ಸಿಕ್ಕಿದಾಗ ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ನನ್ನ ತಂದೆ ತಾಯಿ ಬಡತನದಲ್ಲಿದ್ದರೂ ನನಗೆ ಶಿಕ್ಷಣ ನೀಡಿದ ಪರಿಣಾಮ ನಾನು ಗಡಿ ಭದ್ರತಾ ಪಡೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಪ್ರತಿಯೊಬ್ಬರು ವಿದ್ಯೆಗೆ ಆದ್ಯತೆ ನೀಡಬೇಕು ಎಂದರು.
ಸಹಕಾರಿ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಈರಮಂಡ ಸೋಮಣ್ಣ ಅವರು ಮಾತನಾಡಿ, ಸಹಕಾರಿ ಕ್ಷೇತ್ರ ಮತ್ತು ಸಮಾಜಕ್ಕೆ ನಿಕಟ ಸಂಪರ್ಕವಿದೆ. ಪರಸ್ಪರ ಜನರ ಪಾಲ್ಗೊಳ್ಳುವಿಕೆ, ಪ್ರೀತಿ, ವಿಶ್ವಾಸದ ವಿನಿಮಯ, ಪರಸ್ಪರ ಸಹಕಾರ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಈಗಿನ ಯುವ ಜನಾಂಗ ಸಹಕಾರಿ ಕ್ಷೇತ್ರಗಳಲ್ಲಿ ತಮ್ಮನ್ನು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಮ್ಮ ಸಮಾಜದ ನಿವೇಶನದ ನೀಲಿನಕ್ಷೆ ತಯಾರು ಮಾಡಿ ಸರಕಾರದಿಂದ ಸಹಾಯಧನ ಪಡೆಯುವುದರೊಂದಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಬೇಕೆಂದು ಮನವಿ ಮಾಡಿದರು.
ಮುಕ್ಕಾಟಿರ ಪೂರ್ಣಿಮಾ ಪೂಣಚ್ಚ ಮಾತನಾಡಿ, ಏಕಾಗ್ರತೆ ಮತ್ತು ಛಲದಿಂದ ಮಾತ್ರ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯ. ಪೋಷಕರು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ತಿಳಿಸಿದರು.
ಕೊಯವ ಸಮಾಜದ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಅಂಬೆಗಾಲಿನ ನಡಿಗೆಯಲ್ಲಿದ್ದ ಸಮಾಜವು ಕಳೆದ 18 ವರ್ಷಗಳಿಂದ ಸದೃಢವಾಗಿ ಬೆಳೆದು ನಿಂತು ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರು.
ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಸಮಾಜ ಬಾಂಧವರು ಸರ್ವರೂ ಸಹಕರಿಸಬೇಕು. ಕ್ಷೇತ್ರದ ಶಾಸಕರ ನೆರವಿನಿಂದ ಸರ್ಕಾರದ ಅನುದಾನ ಪಡೆದು ಕಟ್ಟಡ ಕಾಮಗಾರಿಗೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಸಮಾಜದ ಉಪಾಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ಸರಕಾರದ ಸೌಲಭ್ಯಗಳನ್ನು ಕೊಯವ ಸಮಾಜ ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ನಿರ್ದೇಶಕರುಗಳಾದ ಈರಮಂಡ ವಿಜಯ್, ಮಲ್ಲಂಡ ಮಹೇಶ್, ಚೋಕಿರ ಡಾಲ, ಮೇಚಿರ ಹರೀಶ್, ಮುಕ್ಕಾಟಿರ ಹ್ಯಾರಿ ಪೂಣಚ್ಚ, ನೆಂದುಮಂಡ ಗೀತಾ ನಾಣಯ್ಯ, ಈರಮಂಡ ದಮಯಂತಿ, ಚೋಕಿರ ವನಿತ ವಿಜಯ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ವರದಿ ವಾಚಿಸಿದರು. ನಿರ್ದೇಶಕಿ ಅಚ್ಚಪಂಡ ಧರ್ಮಾವತಿ ಕುಶಾಲಪ್ಪ ಪ್ರಾರ್ಥಿಸಿ, ಮೇಚುರ ಮಮತ ಲೋಕೇಶ್ ನಿರೂಪಿಸಿ, ಖಜಾಂಚಿ ಕಳ್ಳಿರ ನಾಣಯ್ಯ ವಂದಿಸಿದರು.
::: ವಿದ್ಯಾರ್ಥಿಗಳಿಗೆ ಪ್ರೋತ್ಸಾಹ :::
10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೇಚಿರ ಶಿಲ್ಪ ಭರತ್, ಚೋಕಿರ ನಂಜಪ್ಪ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಚೋಕಿರ ಶಶಾಂಕ್ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಳ್ಳಿರ ಯಶ್ವಿತ ಪೂಣಚ್ಚ ಮತ್ತು ಈರಮಂಡ ಹೇಮಾವತಿ ತಿಮ್ಮಯ್ಯ ಅವರಿಗೆ ಸಮಾಜದ ದತ್ತಿ ನಿಧಿಯಿಂದ ಪ್ರೋತ್ಸಾಹ ಧನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಈರಮಂಡ ಕೇಸರಿ ಬೋಜಮ್ಮ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು. ಆಟೋಟಗಳ ಸ್ಪರ್ಧೆ ಮತ್ತು ಕೊಡವ ಹಾಡುಗಾರಿಕೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಆಟೋಟಗಳ ಸ್ಪರ್ಧೆಗಳನ್ನು ಈರಮಂಡ ವಿಜಯ್, ಮಲ್ಲಂಡ ಮಹೇಶ್ ಹಾಗೂ ಚೋಕಿರ ಡಾಲ ನಡೆಸಿಕೊಟ್ಟರುಳಿದೇ ಸಂದರ್ಭ ಮೃತಪಟ್ಟ ಸದಸ್ಯರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.








