ಮಡಿಕೇರಿ ನ.20 : ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್, ಕೊಡವ ಎಂ.ಎ.ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ಮತ್ತು ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ನ.24 ರಂದು ವಿಚಾರ ಮಂಡನೆ, ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಸಭಾಂಗಣದಲ್ಲಿ ನಿರ್ಮಾಪಕ, ನಿರ್ದೇಶಕ, ನಟ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಬರೆದಿರುವ ಕೊಡವ ಮಕ್ಕಡ ಕೂಟದ 76ನೇ ಪುಸ್ತಕ “ನಾಡ ಕೊಡಗ್” ಅನಾವರಣಗೊಳ್ಳಲಿದೆ.
ಸಾಹಿತಿ ಹಾಗೂ ಎಂ.ಎ.ಕೊಡವ ವಿಭಾಗದ ಉಪನ್ಯಾಸಕ ಬಾಚರಣಿಯಂಡ ಅಪ್ಪಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ, ಎಂ.ಎ.ಕೊಡವ ವಿಭಾಗದ ಉಪನ್ಯಾಸಕಿ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ, ಕೊಡವ ಎಂ.ಎ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ, “ನಾಡ ಕೊಡಗ್” ಪುಸ್ತಕ ಬರಹಗಾರ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಬರಹಗಾರ್ತಿ ಐಚಂಡ ರಶ್ಮಿ ಮೇದಪ್ಪ “ನಂಗಡ ಮಕ್ಕಳ ಸಂಸ್ಕಾರವಂತಂಗಳಾಯಿತ್ ಬೊಳ್ತುವಲ್ಲಿ ಅವ್ವಂಗಡ ಪಾತ್ರ” ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡವ ಎಂ.ಎ ವಿದ್ಯಾರ್ಥಿಗಳಾದ ಬೊಪ್ಪಂಡ ಶ್ಯಾಮ್ ಪೂಣಚ್ಚ, ಲೆ.ಕರ್ನಲ್ ಬಿ.ಎಂ.ಪಾರ್ವತಿ, ಐಚಂಡ ರಶ್ಮಿ ಮೇದಪ್ಪ, ಪುತ್ತರಿರ ವನಿತ ಮುತ್ತಪ್ಪ, ಬೊಳ್ಳಾರ್ ಪಂಡ ಎನ್.ಹೇಮಾವತಿ (ಜಾನ್ಸಿ), ಬೊಳ್ಳಜಿರ ಬಿ.ಅಯ್ಯಪ್ಪ, ಚೌಂಡಿರ ಶಿಲ್ಪ ಪೊನ್ನಪ್ಪ, ಬೊಳ್ಳಜಿರ ಯಮುನಾ ಅಯ್ಯಪ್ಪ, ಕರವಂಡ ಡ ಸೀಮಾ ಗಣಪತಿ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು.
::: ಪ್ರಕಾಶ್ ಕಾರ್ಯಪ್ಪ ಪರಿಚಯ ::: ಮಡಿಕೇರಿ ತಾಲೂಕು ವ್ಯಾಪ್ತಿಯ ಬೇಂಗೂರು ಚೇರಂಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಪಟ್ಟಿ ನಿವಾಸಿ ಕೊಟ್ಟುಕತ್ತಿರ ಏಲಕ್ಕಿ ಕಾರ್ಯಪ್ಪ-ರಾಗಿಣಿ ದಂಪತಿಯ ಏಕೈಕ ಪುತ್ರ.
1983ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪ್ರಕಾಶ್ ಕಾರ್ಯಪ್ಪ ತಮ್ಮದೇ ಆದ ಸ್ವಸ್ತಿಕ್ ಕನ್‍ಸ್ಟ್ರಕ್ಷನ್ ಮತ್ತು ಸ್ವಸ್ತಿಕ್ ಕಾಂಕ್ರೀಟ್ ಪ್ರೊಡಕ್ಟ್ಸ್ ಸಂಸ್ಥೆಯನ್ನು ಆರಂಭಿಸಿದರು. ಅಲ್ಲದೆ ಸ್ವಸ್ತಿಕ್ ಎಂಟರ್ಟೆನ್ಮೆಂಟ್, ಕೂರ್ಗ್ ಕಾಫಿವುಡ್ ಮೂವಿಸ್ ಎನ್ನುವ ಚಲನ ಚಿತ್ರ ನಿರ್ಮಾಣ, ನಿರ್ದೇಶನ ಸೇರಿದಂತೆ ನಟನೆ, ಸಾಹಿತ್ಯ ಕೃಷಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಇವರ ಪತ್ನಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ತಮ್ಮದೇ ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಮೂಲಕ ಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. ಪ್ರಕಾಶ್ ಕಾರ್ಯಪ್ಪ ಹಾಗೂ ಯಶೋಧ ಪ್ರಕಾಶ್ ದಂಪತಿಯ ಇಬ್ಬರು ಪುತ್ರಿಯರು ಶೈಕ್ಷಣಿಕ ಯಶಸ್ಸಿನ ಹಾದಿ ಹಿಡಿದಿದ್ದಾರೆ.
ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಕೊಡಗಿನಲ್ಲಿಯೇ ಅತ್ಯಧಿಕ ಚಲನಚಿತ್ರಗಳನ್ನು ನಿರ್ಮಿಸಿದ ಹಾಗೂ ನಿರ್ದೇಶಿಸಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಇವರು ಕೊಡವ ಭಾಷೆಯ ಕಥೆ, ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ಕನ್ನಡದ ಕಥೆ, ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ‘ಬಾಕೆಮನೆ’ ‘ಕೊಡಗ್‍ರ ಸಿಪಾಯಿ’ ‘ಸ್ಮಶಾನ ಮೌನ’ ‘ನಾಡ ಪೆದ ಆಶಾ’ ‘ವಿಧೀರ ಕಳಿಲ್’ (ಪೊಮ್ಮಲೆ ಕೊಡಗ್) ಮತ್ತು ‘ರಂಗ ಪ್ರವೇಶ’ ಚಲನಚಿತ್ರಗಳು ಪ್ರಮುಖವಾಗಿವೆ.
ಬಾಕೆಮನೆ, ಕೊಡಗ್‍ರ ಸಿಪಾಯಿ, ಸ್ಮಶಾನಮೌನ, ದೀಕ್ಷ, ನಾಡ ಪೆದ ಆಶಾ ಚಲನಚಿತ್ರಗಳು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅಪಾರ ಜನಮನ್ನಣೆ ಗಳಿಸಿವೆ.
ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮ ಬೇರೆಯೇ ಪ್ರಾಕರಗಳು ಆದರು, ಅವರೆಡನ್ನು ಒಂದಾಗಿಸಿ ನಮ್ಮ ನಾಡು ನುಡಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸದಾ ಒಂದಿಲ್ಲೊಂದು ಕಾಯಕದಲ್ಲಿ ತೊಡಗಿರುವ ಪ್ರಕಾಶ್ ಕಾರ್ಯಪ್ಪ ಅವರ ಒಂಬತ್ತು ಪುಸ್ತಕಗಳು ಈಗಾಗಲೇ ಪ್ರಕಟವಾಗಿದ್ದು, “ನಾಡ ಕೊಡಗ್” ಹತ್ತನೇ ಕೃತಿಯಾಗಿದೆ.