ಮಡಿಕೇರಿ ಡಿ.11 : ಅತ್ಯಂತ ಸೂಕ್ಷ್ಮ ಜನಾಂಗ ಕೊಡವರಿಗೆ ಸಾಂವಿಧಾನಿಕ ಭದ್ರತೆಯ ಅಗತ್ಯವಿದೆ, ಈ ದೇಶದ ಸಂವಿಧಾನವೊಂದೇ ಕೊಡವರ ಗುರುಪೀಠವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಮೈಸೂರಿನ ಜಯಲಕ್ಷ್ಮಿ ಪುರಂನ ಕೊಡವ ಸಹಕಾರ ಭವನದಲ್ಲಿ ನಡೆದ ಕೊಡವ ವಿದ್ಯಾರ್ಥಿ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರಿಗೆ ಕೊಡವ ಗುರುಪೀಠ ಇರಬೇಕು ಎನ್ನುವ ಅಭಿಪ್ರಾಯಗಳಿದೆ. ಆದರೆ ಈ ಹೇಳಿಕೆಗಳು ಸಂಪೂರ್ಣವಾಗಿ ತಪ್ಪು ಮತ್ತು ಕೊಡವ ಬುಡಕಟ್ಟು ಸಮುದಾಯದ ಸಾಮಾಜಿಕ ನಂಬಿಕೆಗಳು ಹಾಗೂ ಪೂರ್ವಜರ ಆರಾಧನಾ ಮಾದರಿಗಳಿಗೆ ವಿರುದ್ಧವಾಗಿದೆ. ಈ ರೀತಿಯ ಪ್ರಸ್ತಾಪಗಳು ಸಾಂವಿಧಾನಿಕ ನೈತಿಕತೆಯನ್ನು ಬುಡಮೇಲು ಮಾಡುವ ಪ್ರಯತ್ನವಾಗಿದೆ. ಕೊಡವರು ಭಾರತೀಯ ಶ್ರೇಷ್ಠ ಸಂವಿಧಾನದ ಮೂಲಕವಷ್ಟೇ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ರಾಜ್ಯದ ವೈಫಲ್ಯ ಮತ್ತು ದುರಾಡಳಿತವನ್ನು ಮುಚ್ಚಿ ಹಾಕಲು, ಕೊಡವರ ಹಾದಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ. ಸಿಎನ್‌ಸಿಯ ಸಾಂವಿಧಾನಿಕ ಬೇಡಿಕೆಗಳ ಕುರಿತು ಕೊಡವ ಜನರ ಮೂಲಕವೇ ತಪ್ಪು ಗ್ರಹಿಕೆ ಮೂಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡವರ ಜನಸಂಖ್ಯೆಯನ್ನು ಹೆಚ್ಚಿಸಬೇಕು, ಕೊಡವ ಪ್ರಾಂತ್ಯದಲ್ಲಿ ವಾಸಿಸುವ ಎಲ್ಲರನ್ನು ಕೊಡವರ ಮಡಿಲಿಗೆ ತರಬೇಕು ಮತ್ತು ಗುರುಪೀಠ ಸ್ಥಾಪನೆಯಾಗಬೇಕು ಎನ್ನುವ ವಾದ ಅರ್ಥಹೀನ ಮತ್ತು ಅಸಂವಿಧಾನಿಕವಾಗಿದೆ ಎಂದು ತಿಳಿಸಿದರು.
ಕೂರ್ಗ್ ಪ್ರದೇಶ 1956 ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಕೊಡವರ ಆಶೋತ್ತರಗಳು ಕಡೆಗಣಿಸಲ್ಪಟ್ಟಿದೆ. ಆಡಳಿತಗಾರರ ನಿರ್ಲಕ್ಷö್ಯದಿಂದ ಇಂದು ಕೊಡವ ಯುವ ಸಮೂಹ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಇದರಿಂದ ಕೊಡವ ಭೂಮಿ ಮತ್ತು ಸಂಸ್ಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಕೊಡವ ಯುವ ಸಮೂಹವನ್ನು ನಿರುದ್ಯೋಗದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಅತ್ಯಂತ ಸೂಕ್ಷ್ಮವಾಗಿರುವ ಕೊಡವ ಸಮುದಾಯ ಉಳಿಯಬೇಕಾದರೆ ಯುವ ಪೀಳಿಗೆ ಹಕ್ಕುಗಳನ್ನು ಪ್ರತಿಪಾದಿಸುವ ಧೈರ್ಯ ತೋರಬೇಕು. ಸಂವಿಧಾನವು ಪ್ರಜಾಪ್ರಭುತ್ವ ಭಾರತದ ಸರ್ವೋಚ್ಚ ದಾಖಲೆಯಾಗಿದೆ. ಇದರ ಆಧಾರದಲ್ಲಿ ಕೊಡವರು ತಮಗೆ ಸೇರಬೇಕಾದ ಹಕ್ಕುಗಳನ್ನು ಮಂಡಿಸುವ ಮೂಲಕ ಸಾಂವಿಧಾನಿಕ ಭದ್ರತೆಯನ್ನು ಪಡೆದುಕೊಳ್ಳಬೇಕು. ಕೊಡವ ಜನಾಂಗದ ಸಂಖ್ಯೆ ಕಡಿಮೆ ಇದೆ ಎಂದು ಯಾರೂ ಅಂಜಬೇಕಾಗಿಲ್ಲ. ಸಣ್ಣ ಸಮುದಾಯದ ಮೇಲೆ ಬಹುಸಂಖ್ಯಾತರು ಸವಾರಿ ಮಾಡದಂತೆ ಎಚ್ಚರ ವಹಿಸಬೇಕು. ಪ್ರಬಲ ಸಮುದಾಯಗಳ ಜನಪ್ರತಿನಿಧಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದರು.
ಕೊಡವ ಬುಡಕಟ್ಟು ಜನಾಂಗ ಮತ್ತು ಸಾಂಪ್ರದಾಯಿಕ ತಾಯ್ನಾಡಿನ ರಕ್ಷಣೆ, ಸಮಾನ ಗೌರವ ಮತ್ತು ಪೋಷಣೆಯ ಭರವಸೆಯೊಂದಿಗೆ ಕೂರ್ಗ್ ಪ್ರದೇಶ 1956ರಲ್ಲಿ ಕರ್ನಾಟಕದೊಂದಿಗೆ ವಿಲೀನಗೊಂಡಿತು. ಆದರೆ ಕೊಡವ ತಾಯ್ನಾಡಿನ ವಿಲೀನದ ನಂತರ ಎಲ್ಲಾ ಭರವಸೆಗಳನ್ನು ಮತ್ತು ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಇಂದು ನಮ್ಮ ನೆಲ, ಭಾಷೆ, ಸಂಸ್ಕೃತಿ, ಅಸ್ಮಿತೆ ಮತ್ತು ಪರಂಪರೆಯ ಹೆಗ್ಗುರುತುಗಳು ಅಳಿವಿನಂಚಿನಲ್ಲಿವೆ. ಕೊಡವ ಯುವ ಪೀಳಿಗೆಯ ಭವಿಷ್ಯವು ಕತ್ತಲೆಯಲ್ಲಿದೆ. ರಾಜ್ಯ ಪ್ರಾಯೋಜಿತ ಕೊಡವ ವಿರೋಧಿ ಚಟುವಟಿಕೆಗಳು ಮುಂದುವರೆದಿದೆ ಎಂದು ನಾಚಪ್ಪ ಆರೋಪಿಸಿದರು.
“ಸಂಸ್ಕಾರ” ಗನ್ ವಿನಾಯಿತಿಯ ಕೊಡವ ಸಾಂಪ್ರದಾಯಿಕ ಹಕ್ಕುಗಳನ್ನು ಕಸಿದುಕೊಳ್ಳಲು ಸರ್ಕಾರ ಪ್ರಯತ್ನಿಸಿದೆ. ಕೊಡವ ಪವಿತ್ರ ಯಾತ್ರಾಸ್ಥಳ ಕಾವೇರಿಗೆ ನಮ್ಮ ಪ್ರವೇಶಕ್ಕೆ ರಾಜ್ಯ ಪ್ರಾಯೋಜಿತ ಕಿಡಿಗೇಡಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೊಡವ ಜನಾಂಗೀಯ ಅಧ್ಯಯನವನ್ನು ಸ್ಥಗಿತಗೊಳಿಸಿದೆ. ಅಧ್ಯಯನ ಪೂರ್ಣಗೊಂಡಿದ್ದರೆ ಸಂವಿಧಾನದ ಎಸ್‌ಟಿ ಪಟ್ಟಿಯಲ್ಲಿ ಕೊಡವರನ್ನು ಸೇರಿಸಲು ಸುಗಮ ಹಾದಿಯಾಗುತ್ತಿತ್ತು. ಇದರಿಂದ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತಿತ್ತು. ಆದರೆ ರಾಜ್ಯ ಸೃಷ್ಟಿಸಿದ ಅತಂತ್ರ ಪರಿಸ್ಥಿತಿಯ ಕಾರಣದಿಂದಾಗಿ ಕೊಡವ ಯುವಕರು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪರ್ಯಾಯ ಮಾರ್ಗವಿಲ್ಲದೆ ವಲಸೆ ಹೋಗುತ್ತಿದ್ದಾರೆ ಎಂದರು.
ಅತ್ಯಂತ ಸೂಕ್ಷö್ಮ ಕೊಡವ ಜನಾಂಗವಾದ ನಾವು ನಮ್ಮ ಹಕ್ಕುಗಳನ್ನು ನಿರ್ಧರಿಸಬೇಕು ಮತ್ತು ಸಂವಿಧಾನದ ಮೂಲಕ ನಮ್ಮದೇ ಆದ ಸ್ವ-ಆಡಳಿತ ವ್ಯವಸ್ಥೆಗಳನ್ನು ಹೊಂದಿರಬೇಕು. ಸಣ್ಣ ಸಮುದಾಯವನ್ನು ವರ್ಣ ಸಮೀಕರಣಗೊಳಿಸದೆ ಜನಾಂಗೀಯ ಹೆಗ್ಗುರುತನ್ನು ಉಳಿಸಿಕೊಳ್ಳಲು ದೇಶದ ಸಂವಿಧಾನ ಅವಕಾಶ ನೀಡಿದೆ. ಮೈಕ್ರೋಸ್ಕೋಪಿಕ್ ಗುಂಪುಗಳ ಎಲ್ಲಾ ಹಕ್ಕುಗಳನ್ನು ಹೊಂದಲು ಮತ್ತು ಪಡೆಯಲು ಶಕ್ತಿ, ಮಾನದಂಡ, ಅರ್ಹತೆಯನ್ನು ಸಂವಿಧಾನದಲ್ಲಿ ಹಾಗೂ ವಿಶ್ವಸಂಸ್ಥೆ /ಯುಎನ್‌ನ ಚಾರ್ಟರ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ನಾಚಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಲ್ ಬಾಳೆಯಡ ಸುಬ್ರಮಣಿ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊಂಜಂಡ ಗಪ್ಪಣ್ಣ, ಕೊಡವ ವಿದ್ಯಾರ್ಥಿ ಸಂಘಗಳ ಒಕ್ಕೂಟ ಅಧ್ಯಕ್ಷ ಮನೆಯಪಂಡ ಕಾರ್ಯಪ್ಪ, ಉಪಾಧ್ಯಕ್ಷ ಚೋಳಪಂಡ ದೇಚಮ್ಮ, ಗೌರವ ಕಾರ್ಯದರ್ಶಿ ಮುಂಡಿಯೊಳಂಡ ಮಾಚಯ್ಯ, ಜಂಟಿ ಕಾರ್ಯದರ್ಶಿ ಮೊಟ್ಟೆಯಂಡ ಇಶಾನಿ ಕುಟ್ಟಪ್ಪ, ಖಜಾಂಚಿ ಬಲ್ಯಂಡ ಮೌರ್ಯ, ಜಂಟಿ ಖಜಾಂಚಿ ನಾಯಕಂಡ ತ್ರಿಷಾ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಮಂಡೇಟಿರ ದೇಗುಲ್, ಸಾಂಸ್ಕೃತಿಕ ಮುಖ್ಯಸ್ಥೆ (ಪೊಮ್ಮಕ್ಕ) ಚೆಟ್ಟಿರ ಗ್ರಂಥ ಮತ್ತಿತರರು ಉಪಸ್ಥಿತರಿದ್ದರು.
Breaking News
- *ಮಡಿಕೇರಿಯಲ್ಲಿ ಡಾ.ಅಖಿಲ್ ಕುಟ್ಟಪ್ಪ – ಅಶ್ವಥ್ ಅಯ್ಯಪ್ಪ ಸ್ಮರಣಾಥ೯ ಕ್ರಿಕೆಟ್ ಪಂದ್ಯಾವಳಿ : ಸಾಧಕ ಕ್ರೀಡಾಪಟುಗಳಾಗುವತ್ತ ಚಿತ್ತ ಹರಿಸಿ : ನಿವೃತ್ತ ಏರ್ ಮಾಷ೯ಲ್ ಕಾಯ೯ಪ್ಪ ಕರೆ*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*
- *ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ಹರಪಳ್ಳಿ ರವೀಂದ್ರ*
- *ಕೂಡಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಆಟೋ ಚಾಲಕರು ಕನ್ನಡ ನಾಡು-ನುಡಿಯ ರಾಯಭಾರಿಗಳು : ವಿ.ಪಿ.ಶಶಿಧರ್ ಬಣ್ಣನೆ*
- *ಗೋಣಿಕೊಪ್ಪ : ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭ : ಡಾ.ಕೆ.ಬಸವರಾಜು*
- *ಶಾಸಕ ಎ.ಎಸ್.ಪೊನ್ನಣ್ಣ ರಿಗೆ ವಿಧಾನಸಭಾಧ್ಯಕ್ಷರ ಕಚೇರಿಯಿಂದ ಕೊಡುಗೆ*
- *ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ನಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ*
- *ವೀರ ಸೇನಾನಿಗಳಿಗೆ ಅಗೌರವ : ನಿವೃತ್ತ(ಮಾಜಿ) ಯೋಧರ ಒಕ್ಕೂಟ ಅರೆ ಸೇನಾಪಡೆ ಖಂಡನೆ : ಆರೋಪಿಯ ಗಡಿಪಾರಿಗೆ ಆಗ್ರಹ*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ ಫಲಿತಾಂಶ*
- *ನ.29ರಂದು ಕೊಡಗು ಜಿಲ್ಲಾ ನಿವೃತ್ತ(ಮಾಜಿ) ಯೋಧರ ಒಕ್ಕೂಟ ಅರೆ ಸೇನಾಪಡೆಯ 12ನೇ ವಾರ್ಷಿಕ ಮಹಾಸಭೆ*