ಮಡಿಕೇರಿ ಡಿ.19 : ಕೆಲವು ವ್ಯಕ್ತಿಗಳು ಸಂಸತ್ ಭವನದೊಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ 92 ಸಂಸದರನ್ನು ಅಮಾನತು ಮಾಡಿರುವುದು ದೇಶದ ಇತಿಹಾಸದಲ್ಲೇ ದೊಡ್ಡ ದುರಂತ ಮತ್ತು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೇ ಕಪ್ಪು ಚುಕ್ಕೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಶ್ನೆ ಕೇಳಿದವರಿಗೆ ಅಮಾನತಿನ ಶಿಕ್ಷೆ ನೀಡಿರುವುದು ಖಂಡನೀಯ. ವಿಶ್ವದ ಯಾವುದೇ ಭಾಗದಲ್ಲಿ ಈ ರೀತಿಯ ಕ್ರಮವಾಗಿಲ್ಲ ಎಂದರು.
ಪಾಸ್ ನೀಡಿದವರು ಕಾಂಗ್ರೆಸ್ ಸಂಸದರಾಗಿದ್ದರೆ ಮತ್ತು ಸಂಸತ್ ಭವನದೊಳಗೆ ಮುಸ್ಲಿಂ ವ್ಯಕ್ತಿ ಪ್ರವೇಶಿಸಿದ್ದರೆ ಬಿಜೆಪಿ ಮಂದಿಯ ಪ್ರತಿಕ್ರಿಯೆಗಳು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿಗೆ ನಿಜವಾದ ನೈತಿಕತೆ ಇದ್ದರೆ ಪ್ರತಾಪ್ ಸಿಂಹರನ್ನು ಅಮಾನತು ಮಾಡಲಿ ಎಂದು ಒತ್ತಾಯಿಸಿದರು.
ಭದ್ರತಾ ಲೋಪದ ಕುರಿತು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಮಂತ್ರಿ ಅಥವಾ ಗೃಹ ಸಚಿವರು ಇಲ್ಲಿಯವರೆಗೆ ಉತ್ತರ ನೀಡಿಲ್ಲ. ಸಂಸತ್ ಇರುವುದೇ ಪ್ರಶ್ನಿಸಲು ಮತ್ತು ಉತ್ತರ ನೀಡಲು, ಆದರೆ ಪ್ರಶ್ನೆ ಮಾಡುವುದೇ ತಪ್ಪು ಎನ್ನುವ ಪರಿಸ್ಥಿತಿ ಉದ್ಭವಿಸಿದೆ. ಸಂಸತ್ ಭವನಕ್ಕೇ ರಕ್ಷಣೆ ನೀಡಲಾಗದವರು ದೇಶದ ಜನರಿಗೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.
ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಘಟನೆ ನಡೆದು ಏಳು ದಿನ ಕಳೆದರೂ ಒಂದು ನೋಟಿಸ್ ನ್ನು ಕೂಡ ನೀಡಿಲ್ಲ. ತನಿಖೆಗಾಗಿ ಅವರ ಮೂರು ಕಚೇರಿಗಳನ್ನು ವಶಕ್ಕೆ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಲಕ್ಷ್ಮಣ, ಆರೋಪಿ ಮನೋರಂಜನ್ ನೊಂದಿಗೆ ಇರುವ ಸಂಬಂಧದ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ದೇಶದ ಜನರೆದುರು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಾಪ್ ಸಿಂಹ ಅವರು ಪಾಸ್ ನೀಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಮನೋರಂಜನ್ ಜೊತೆಗಿನ ಆತ್ಮೀಯತೆ ಏನು ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ. ಇದಕ್ಕೆ ಸಂಸದರು ಉತ್ತರ ನೀಡಲೇಬೇಕಾಗಿದೆ ಎಂದರು.
ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಬಿಜೆಪಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ. ಸುಳ್ಳು ಹೇಳಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರನನ್ನು ಮೈಸೂರು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಲು ಹೀಗೆಲ್ಲ ಮಾಡಿಸುತ್ತಿದ್ದಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಎಲ್ಲೂ ಕ್ಷುಲ್ಲಕ ರಾಜಕಾರಣ ಮಾಡಿಲ್ಲ, ಅಲ್ಲದೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರ ಪುತ್ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಲಕ್ಷ್ಮಣ ಸ್ಪಷ್ಟಪಡಿಸಿದರು.
ಸಂಸತ್ ಭವನದಲ್ಲಿ ನಡೆದ ಘಟನೆಯ ಕುರಿತು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಸಂಸದ ಪ್ರತಾಪ್ ಸಿಂಹ ಅವರು ಹುಬ್ಬಳಿಯ ಶಾಸಕರೊಬ್ಬರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಕುರಿತು ಪ್ರಸ್ತಾಪಿಸಿದ ಕಾರಣಕ್ಕಾಗಿ ಎರಡು ಪುಟಗಳ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಹೆಸರಿಡಬೇಕೆಂದು 2015 ಅಕ್ಟೋಬರ್ 31 ರಂದು ಕ್ಯಾಬಿನೆಟ್ ತೀರ್ಮಾನಿಸಿದ್ದೇ ಅಂದಿನ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ. ಸಂಸದ ಪ್ರತಾಪ್ ಸಿಂಹ ಅವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಕಳೆದ 9 ವರ್ಷಗಳಿಂದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಹೆಸರಿಡುವ ಶಿಫಾರಸ್ಸಿಗೆ ಯಾಕೆ ಅನುಮೋದನೆ ಪಡೆಯಲಿಲ್ಲ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಚಿವ ಆರ್.ಅಶೋಕ್ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಹವಣಿಸುತ್ತಿದ್ದಾರೆ. ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯ ಶೋಧನಾ ಸಮಿತಿಯಿಂದ ತನಿಖೆ ಮಾಡಿಸುವ ಮಾತನಾಡುತ್ತಿದ್ದಾರೆ. ಆದರೆ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯ ಶೋಧನಾ ಸಮಿತಿಯಿಂದ ಯಾಕೆ ತನಿಖೆ ಮಾಡಿಸಿಲ್ಲ, 37 ಮಹಿಳೆಯರ ಸಾವು ಸಂಭವಿಸಿದರೂ ಪ್ರಧಾನಮಂತ್ರಿಗಳು ಯಾಕೆ ಭೇಟಿ ನೀಡಿಲ್ಲ ಎಂದು ಲಕ್ಷ್ಮಣ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್ ಹಾಗೂ ಮೈಸೂರು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಪಿ.ಎಂ.ರಾಮು ಉಪಸ್ಥಿತರಿದ್ದರು.