ಸುಂಟಿಕೊಪ್ಪ ಮಾ.17 NEWS DESK : ಬಾಲಕನೋರ್ವ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ರೆಸಾರ್ಟ್ ವೊಂದರ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುಂಟಿಕೊಪ್ಪ ಸಮೀಪದ ಹೇರೂರು ಎಂಬಲ್ಲಿ ಇಂದು ಸಂಜೆ ನಡೆದಿದೆ. 7ನೇ ಹೊಸಕೋಟೆ ಕಲ್ಲೂರು ಗ್ರಾಮದ ನಿವಾಸಿ ಅಬ್ಬಾಸ್ ಎಂಬುವವರ 15 ವರ್ಷದ ಪುತ್ರ ಅಲ್ಟೋ ಕಾರನ್ನು ಚಲಾಯಿಸಿಕೊಂಡು ಬಸವನಹಳ್ಳಿ ಮಾರ್ಗವಾಗಿ ಅತೀ ವೇಗದಿಂದ ರೆಸಾರ್ಟ್ ಬಳಿ ಧಾವಿಸಿ ಬಂದಿದ್ದಾನೆ ಎಂದು ಆರೋಪಿಸಲಾಗಿದೆ. ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಇನ್ನೊಂದು ಬದಿಯಲ್ಲಿರುವ ರೆಸಾರ್ಟ್ ನ ವಾಹನ ಪಾರ್ಕಿಂಗ್ ಸ್ಥಳದಲ್ಲಿನ ಕಾಂಪೌಂಡ್ ಗೆ ಅಪ್ಪಳಿಸಿ ರಸ್ತೆಯಲ್ಲಿ ಮೂರು ಪಲ್ಟಿಯಾಗಿದೆ. ಈ ಸಂದರ್ಭ ಕಾಂಪೌಂಡ್ ಸಮೀಪ ಕರ್ತವ್ಯ ನಿರತರಾಗಿದ್ದ ಇಬ್ಬರು ಮಹಿಳಾ ಸಿಬ್ಬಂದಿಗಳಿಗೆ ಕಾರು ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.










