
ಮಡಿಕೇರಿ ಏ.18 NEWS DESK : ಕಾಂಗ್ರೆಸ್ಸಿಗರು ಕುರ್ಚಿ ಅಜೆಂಡಾದಿಂದ ಇನ್ನೂ ಹೊರ ಬಂದಿಲ್ಲ, ಲೋಕಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.
ಕುಶಾಲನಗರದ ಗೌಡ ಸಮಾಜದ ಆವರಣದಲ್ಲಿ ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರಕಾರ ನೀಡಿರುವ ಗ್ಯಾರಂಟಿ ಯೋಜನೆ ಸರಕಾರದ ಖಜಾನೆ ಖಾಲಿಯಾದ ನಂತರ ಬಂದ್ ಆಗಲಿದೆ ಎಂದು ಹೇಳಿದ ಸದಾನಂದ ಗೌಡರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ನಿರಂತರ ಹಾಗೂ ಶಾಶ್ವತ ಯೋಜನೆಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎನ್‍ಡಿಎ ಮೈತ್ರಿಕೂಟ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಅಪಪ್ರಚಾರದ ಆಧಾರದಲ್ಲಿ ಗೆಲುವಿಗೆ ಶತ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿರುವುದು ಜನರ ದುರ್ದೈವ, ಈ ಬಾರಿಯ ಚುನಾವಣೆ ವಿಭಿನ್ನವಾದ ಚುನಾವಣೆಯಾಗಿದ್ದು, ಜಾತಿ ಲೆಕ್ಕಾಚಾರ ನಡೆಯುವುದಿಲ್ಲ. ಮೋದಿ ಅವರ ಕಾರ್ಯವೈಖರಿ ಜನಪರವಾಗಿದ್ದು, 3ನೇ ಅವಧಿಗೆ ಕೇಂದ್ರದಲ್ಲಿ ಮುಂದುವರೆಸಲು ಅಗತ್ಯ ಬೆಂಬಲ ಬೇಕಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತಕ್ಕೆ ಬೇಕಾದಷ್ಟು ಕಡೆಗಳಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೂ ನಾವೇ ದೇಶದ ಆಳ್ವಿಕೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವುದು ಕಾಂಗ್ರೆಸ್ಸಿನ ಬಹುದೊಡ್ಡ ತಮಾಷೆಯ ವಿಷಯವಾಗಿದೆ. ಇಂಡಿಯಾ ಒಕ್ಕೂಟದ ಮೂಲಕ ಕಾಂಗ್ರೆಸ್ 200 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಮೈತ್ರಿ ಪಕ್ಷದ ನಾಯಕರು ಪ್ರತಿಯೊಬ್ಬರೂ ನಾವೇ ಪ್ರಧಾನಿ ಅಭ್ಯರ್ಥಿ ಎನ್ನುತ್ತಿರುವುದು ಎಲ್ಲೆಡೆ ಕೇಳಿ ಬರುತ್ತಿದೆ ಎಂದು ಡಿ.ವಿ.ಸದಾನಂದ ಗೌಡ ಲೇವಡಿ ಮಾಡಿದರು.
ಜೆಡಿಎಸ್ ವರಿಷ್ಠ ದೇವೇಗೌಡರು ದೇಶದಲ್ಲಿ ಮತ್ತೆ ಭ್ರಷ್ಟಾಚಾರ ರಹಿತ ಆಡಳಿತ ಮುಂದುವರೆಯಬೇಕು ಎನ್ನುವ ದೃಷ್ಟಿಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ರಾಜ್ಯ ಸರ್ಕಾರ ಜನವಿರೋಧಿ, ರೈತ ವಿರೋಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಇನ್ನೂ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ. ತಮ್ಮ ಅವಧಿಯ ಕಾಮಗಾರಿಗಳನ್ನು ಕಾಂಗ್ರೆಸ್ ತನ್ನದೆಂದು ಹೇಳಿಕೊಂಡು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಟೀಕಿಸಿದರು.
ಗ್ರಾಮೀಣ ಹಾಗೂ ಪಟ್ಟಣದ ಜನತೆಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳು ನಿರಂತರವಾಗಿ ಬರುತ್ತಿದ್ದು, ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಕಾಂಗ್ರೆಸ್ ಜಾತಿ ಒಡೆಯುವ ಕೆಲಸ ಮಾಡುತ್ತಿದೆ. ಜಾತಿಯ ವಿಷಬೀಜ ಬಿತ್ತುತ್ತಿದ್ದು, ಮತಗಳನ್ನು ಒಡೆಯುವ ಷಡ್ಯಂತ್ರ ಮಾಡುತ್ತಿದೆ ಎಂದರು.
ಜೆಡಿಎಸ್ ಜಿಲ್ಲಾ ಪ್ರಮುಖ ಸಿ.ಎಲ್.ವಿಶ್ವ ಮಾತನಾಡಿ ಈ ಚುನಾವಣೆಯಲ್ಲಿ ಜಾತಿ ರಾಜಕಾರಣ ನಡೆಯಲು ಸಾಧ್ಯವಿಲ್ಲ. ರೈತರ ಸಂಕಷ್ಟಕ್ಕೆ ಕೇಂದ್ರ ಹಲವು ಯೋಜನೆಯನ್ನು ರೂಪಿಸಿದೆ, ಈ ನಿಟ್ಟಿನಲ್ಲಿ ಮೋದಿ ಅವರ ನಾಯಕತ್ವಕ್ಕೆ ಪ್ರಾಮಾಣಿಕವಾಗಿ ಬೆಂಬಲ ನೀಡುವುದಾಗಿ ಘೋಷಿಸಿದರು.
ಕುಶಾಲನಗರ ಅಧ್ಯಕ್ಷ ಎಂ.ಚರಣ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ತಾಲ್ಲೂಕು ಅಧ್ಯಕ್ಷ ಗೌತಮ್, ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಮಾಜಿ ಜಿ.ಪಂ ಸದಸ್ಯೆ ಮಂಜುಳಾ, ಜೆಡಿಎಸ್ ಪ್ರಮುಖರಾದ ರಾಮಣ್ಣ, ಚಂದ್ರು, ವಸಂತ್ ಮತ್ತಿತರರು ಉಪಸ್ಥಿತರಿದ್ದರು.











