ಮಡಿಕೇರಿ ಏ.29 NEWS DESK : ರಿಯಾಲಿಟಿ ಶೋವೊಂದರದಲ್ಲಿ ಮೆಕ್ಯಾನಿಕ್ ಗಳ ಕುರಿತು ಅವಹೇಳನ ಮಾಡಿರುವ ಆರೋಪದಡಿ ಖಾಸಗಿ ದೃಶ್ಯವಾಹಿನಿ, ಕಾರ್ಯಕ್ರಮದ ಆಯೋಜಕರು, ತೀರ್ಪುಗಾರರು ಹಾಗೂ ನಿರೂಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಡಿಕೇರಿ ಟೂ ವೀಲರ್ಸ್ ಮೆಕ್ಯಾನಿಕ್ ಗಳು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಕ್ಯಾನಿಕ್ ಗಳು ಖಾಸಗಿ ದೃಶ್ಯ ವಾಹಿನಿಯೊಂದರಲ್ಲಿ ಪ್ರಸಾರವಾದ ರಿಯಾಲಿಟಿ ಶೋದಲ್ಲಿ ಮೆಕ್ಯಾನಿಕ್ ಗಳ ಕುರಿತು ಕೀಳು ಮಟ್ಟದ ಸಂಭಾಷಣೆ ಬಳಕೆ ಮಾಡಲಾಗಿದೆ. ಯುವ ಪ್ರತಿಭೆಯೊಬ್ಬಳ ಮೂಲಕ ಮೂಲಕ ಸಂಭಾಷಣೆ ಹೇಳಿಸಲಾಗಿದ್ದು, ಇದು ಇಡೀ ಮೆಕಾನಿಕ್ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. “ಮೆಕಾನಿಕ್ ಗಳನ್ನು ಪ್ರೇಮಿಸಿ ವಿವಾಹವಾದರೆ ಜೀವನದುದ್ದಕ್ಕೂ ಗ್ರೀಸ್ ತಿನ್ನಬೇಕಾಗುತ್ತದೆ” ಎಂದು ಸಂಭಾಷಣೆ ಹೇಳುವ ಮೂಲಕ ಮೆಕಾನಿಕ್ ಗಳನ್ನು ಕೀಳಾಗಿ ಕಾಣಲಾಗಿದೆ. ಅಲ್ಲದೆ ಈ ಅವಹೇಳನಾಕಾರಿ ಸಂಭಾಷಣೆಗೆ ಕಾರ್ಯಕ್ರಮದ ನಿರೂಪಕರು ಹಾಗೂ ತೀರ್ಪುಗಾರರು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ತೀರ್ಪುಗಾರರ ಸ್ಥಾನದಲ್ಲಿದ್ದ ಖ್ಯಾತ ವ್ಯಕ್ತಿಗಳು ಮೆಕಾನಿಕ್ ಗಳನ್ನು ಅವಮಾನಿಸಿದಾಗ ವಿರೋಧಿಸದೆ ಪ್ರೋತ್ಸಾಹಿಸಿರುವುದು ವಿಷಾದನೀಯ ಮತ್ತು ಖಂಡನೀಯ. ಇಡೀ ವಿಶ್ವದ ಶೇ.70 ರಷ್ಟು ಕಾರ್ಯಚಟುವಟಿಕೆಗಳು ಮೆಕ್ಯಾನಿಕ್ ಗಳಿಂದಲೇ ನಡೆಯುತ್ತದೆ. ಇಂದು ದೇಶದ ವಿಜ್ಞಾನಿಗಳು ಚಂದ್ರಲೋಕವನ್ನು ತಲುಪಿದ್ದಾರೆ ಎಂದರೆ ಅದಕ್ಕೆ ಮೆಕಾನಿಕ್ ಗಳೇ ಕಾರಣ. ಮೆಕಾನಿಕ್ ಗಳನ್ನು ಮದುವೆಯಾದವರು ಯಾರೂ ಉಪವಾಸದಿಂದ ಬೀದಿ ಪಾಲಾಗಿಲ್ಲ. ಎಲ್ಲರೂ ಗೌರವಯುತವಾಗಿ ಬದುಕು ಸಾಗಿಸುತ್ತಿದ್ದಾರೆ.
ಮೆಕಾನಿಕ್ ಗಳನ್ನು ಅವಮಾನಿಸಿರುವ ಮತ್ತು ಮೆಕಾನಿಕ್ ಗಳ ವೃತ್ತಿ ಬದುಕಿಗೆ ಅಗೌರವ ತೋರಿರುವ ಕಾರ್ಯಕ್ರಮದ ಸಂಭಾಷಣೆಯ ವಿರುದ್ಧ ರಾಜ್ಯವ್ಯಾಪಿ ಮೆಕಾನಿಕ್ ಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಮಡಿಕೇರಿ ಟೂ ವೀಲರ್ಸ್ ಮೆಕ್ಯಾನಿಕ್ ಗಳಾದ ನಾವುಗಳು ಕೂಡ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಮೆಕ್ಯಾನಿಕ್ ಹೆಚ್.ಎಸ್.ಮಣಿ ತಿಳಿಸಿದರು.
ಎಸ್‌ಪಿ ಗೆ ದೂರು ನೀಡುವ ಸಂದರ್ಭ ಮತ್ತು ಸುದ್ದಿಗೋಷ್ಠಿಯಲ್ಲಿ ಮ್ಯಾಕನಿಕ್‌ಗಳಾದ ಹೆಚ್.ಎಸ್.ಮಣಿ ದೇವರಾಜ್, ಬಿ.ಯು.ಅನಂತ್, ಎಸ್.ಬಿ.ಕಿರಣ್, ಚಂದ್ರು, ಬಿ.ಎಸ್.ಗಣೇಶ್ ಹಾಗೂ ಪಿ.ಎಂ.ಉಮ್ಮರ್ ಉಪಸ್ಥಿತರಿದ್ದರು.