ಮಡಿಕೇರಿ ಏ 30 NEWS DESK : ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತವಾಗಿರುವ ಸಮಾಗಮ ಬೇಸಿಗೆ ಶಿಬಿರ ನೂರಾರು ಮಕ್ಕಳಿಗೆ ವಿನೂತನ ವಿಚಾರಗಳ ಕಲಿಕೆಗೆ ನೆರವಾಗಿದೆ.
ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾಥಿ೯ಗಳನ್ನು ತರಬೇತುಗೊಳಿಸುವ ಉದ್ದೇಶದಿಂದ 20 ದಿನಗಳಿಂದ ನಡೆಯುತ್ತಿರುವ ಸಮಾಗಮ ಬೇಸಿಗೆ ಶಿಬಿರದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 250 ಹೆಚ್ಚು ವಿದ್ಯಾಥಿ೯ಗಳು ವೈವಿಧ್ಯಮಯ ವಿಭಾಗಗಳಲ್ಲಿ ತಮ್ಮ ಇಷ್ಟದ ವಿಷಯಗಳನ್ನು ಆಯಾ ವಿಚಾರಗಳನ್ನು ಪರಿಣಿತರಿಂದ ತಿಳಿದುಕೊಳ್ಳುತ್ತಿದ್ದಾರೆ.
ಭಾರತೀಯ ಸಂಸ್ಕೖತಿಯ ಜತೆಗೇ ಕ್ರೀಡೆಯಲ್ಲಿಯೂ ಸಮಾಗಮದಲ್ಲಿ ತರಬೇತಿ ನೀಡಲಾಗುತ್ತಿದೆ. ಹಾಕಿ ಕ್ರೀಡೆಯ ಬಗ್ಗೆ ಅರುಣ್ ಹಾಗೂ ಕುಶಾಲಪ್ಪ ಕ್ರಿಕೆಟ್ ಬಗ್ಗೆ ರೆನ್ ಟ್ರೆವರ್ ಡೈಸ್ , ಮಹೇಶ್ ಮತ್ತು ಶಾಹಿಲ್. , ಅಥ್ಲೆಟಿಕ್ಸ್ ಬಗ್ಗೆ ರೇಷ್ಮಾ ದೇವಯ್ಯ, ಬ್ಯಾಸ್ಕೆಟ್‌ಬಾಲ್ ಬಗ್ಗೆ ರಾಯಲ್ ಜೊಜೊ, ಫುಟ್ಬಾಲ್ ಸಂಬಂಧಿತ ಎಂ. ಕ್ರಿಸ್ಟೋಫರ್, ಹ್ಯಾಂಡ್ಬಾಲ್ ಕ್ರೀಡೆಯನ್ನು ಚಿಕ್ಕಣ್ಣ, ಟೇಬಲ್ ಟೆನ್ನಿಸ್ ಕ್ರೀಡಾವಿಭಾಗದಲ್ಲಿ ರಚನ್ ಪೊನ್ನಪ್ಪ ತರಬೇತುದಾರರಾಗಿದ್ದಾರೆ.
ಮಡಿಕೇರಿಯ ಹಿರಿಯ ಚೆಸ್ ಆಟಗಾರ ಎನ್.ಟಿ.ಶಂಕರನಾರಾಯಣ ಅವರು ಮಕ್ಕಳಿಗೆ ಚೆಸ್ ಕಲಿಸಿದರೆ, ಕ್ಯಾಲಿಗ್ರಾಫಿ ವಿಭಾಗದಲ್ಲಿ ಅಕ್ಷರದ ಮಹತ್ವವನ್ನು ಮಮತಾ ಶಾಸ್ತ್ರಿ ಕಲಿಸುತ್ತಿದ್ದಾರೆ. ಕಲೆ ಮತ್ತು ಕರಕುಶಲ ಕುರಿತಂತೆ ಸಿ.ಎಲ್.ಪವನ್ ಕುಮಾರ್, ಪ್ರದೀಪ್ ಮತ್ತು ಪ್ರಸನ್ನ ಕುಮಾರ್ , ರೊಬೊಟಿಕ್ಸ್ ವಿಚಾರವಾಗಿ ಕೆ.ಅನು, ಸಂಗೀತ ವಾದ್ಯ ಗಳ ತರಬೇತಿ ಯನ್ನು ಫ್ರಾಂಕೋ ಕಲಿಸುತ್ತಿದ್ದಾರೆ.
ಶಾಸ್ತ್ರೀಯ ನೃತ್ಯವನ್ನು ರೋಜಾ , ಫ್ರೀಸ್ಟೈಲ್ ಮತ್ತು ಸಮಕಾಲೀನ ನೖತ್ಯವನ್ನು ಅಭಿಷೇಕ್ ಕಲಿಸುತ್ತಿದ್ದಾರೆ. ಇದಲ್ಲದೇ ಸಣ್ಣ ಮಕ್ಕಳಿಗಾಗಿ ಕಿಡ್ಸ್ ಫೆಸ್ಟ್ ಅನ್ನು ಆಯೋಜಿಸಲಾಗಿದೆ. ಇಲ್ಲಿ ಯೋಗ ಮತ್ತು ವ್ಯಾಯಾಮವನ್ನು ವಿದ್ಯಾ, ಸಂಗೀತ ಕಲೆಯನ್ನು ಆಲೆಮಾಡ ಚಿತ್ರಾ ಮತ್ತು ಪ್ರತಿಭಾ ಶೇಟ್, ಕಲೆ ಮತ್ತು ಕರಕುಶಲ ಹುಸ್ನಾ ಹಾಗೂ ನೃತ್ಯವನ್ನು ನಮ್ರತಾ ಪಿ ಚೆಂಗಪ್ಪ ಕಲಿಸುತ್ತಿದ್ದಾರೆ.
ಸಮಾಗಮ ಬೇಸಿಗೆ ಶಿಬಿರ ಸಾಕಷ್ಟು ಪ್ರಯೋಜನಕಾರಿಯಾಗಿದ್ದು ಅನೇಕ ವಿಚಾರಗಳನ್ನು ಈ ಶಿಬಿರದಲ್ಲಿ ತಿಳಿದುಕೊಂಡೆವು ಎಂದು ಶಿಬಿರಾಥಿ೯ ವಿದ್ಯಾಥಿ೯ಗಳು ಹೆಮ್ಮೆಯಿಂದ ಹೇಳುತ್ತಾರೆ.
ಸಮಾಗಮ ಶಿಬಿರವು ಹೆಸರೇ ಹೇಳುವಂತೆ ವಿವಿಧ ವಿಚಾರಗಳ ಸಮಾಗಮವಾಗಿದ್ದು ಪಠ್ಯವನ್ನು ವಷ೯ದ ಇತರ ದಿನಗಳಲ್ಲಿ ಕಲಿಯುವ ವಿದ್ಯಾಥಿ೯ಗಳು ರಜೆ ಅವಧಿಯಲ್ಲಿ ಮನರಂಜನಾತ್ಮಕವಾಗಿ ಹಲವಾರು ಹೊಸ ವಿಚಾರಗಳನ್ನು ಕಲಿಯಬೇಕೆಂಬ ಉದ್ದೇಶದಿಂದ ಸಮಾಗಮ ಶಿಬಿರ ಆಯೋಜಿಸಿದ್ದಾಗಿ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರಾ ಹೇಳಿದರು.
ಮೇ 1 ರಂದು ಸಮಾಗಮ ಬೇಸಿಗೆ ಶಿಬಿರ ಶಾಲೆಯ ಚಿಗುರು ಸಭಾಂಗಣದಲ್ಲಿ ಸಮಾಪನಗೊಳ್ಳಲಿದ್ದು ಮೈಸೂರಿನ ಮ್ಯಾನೇಜ್ ಮೆಂಟ್ ಸಲಹೆಗಾರ ಕೊಡಂದೇರ ಹರೀಶ್ ಮಾಚಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.