ಮಡಿಕೇರಿ ಮೇ 2 NEWS DESK : ಕೊಡವ ಕುಟುಂಬಗಳ ನಡುವಿನ 24ನೇ ಹಾಕಿ ಹಬ್ಬ ಪ್ರತಿಷ್ಠಿತ “ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024” ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಗಿನ್ನಿಸ್ ವಿಶ್ವ ದಾಖಲೆ ಬರೆಯುವ ಮೂಲಕ ಸಣ್ಣ ಕುಟುಂಬವೊಂದು ದೊಡ್ಡ ಸಾಧನೆ ಮಾಡಿದೆ ಎಂದು ಕುಂಡ್ಯೋಳಂಡ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಂಡ್ಯೋಳಂಡ ಹಾಕಿ ಹಬ್ಬದ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಹಾಗೂ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಅವರು ಕೇವಲ 103 ಸದಸ್ಯ ಬಲದ ಕುಟುಂಬವೊಂದು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವೆಂದರು.
ಕಳೆದ ಒಂದು ವರ್ಷದಿಂದ ಹಾಕಿ ಹಬ್ಬದ ಯಶಸ್ಸಿಗಾಗಿ ಎಲ್ಲರ ಸಹಕಾರ ಪಡೆದು ಶ್ರಮಿಸಲಾಗಿದೆ. 30 ದಿನಗಳ ಕಾಲ ನಡೆದ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ನಲ್ಲಿ 346 ಕುಟುಂಬಗಳ 4,834 ಆಟಗಾರರು ಪಾಲ್ಗೊಂಡಿದ್ದರು. 360 ಕೊಡವ ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದರು. ಇದು ಗಿನ್ನಿಸ್ ವಿಶ್ವ ದಾಖಲೆ ಬರೆಯಲು ಸಹಕಾರಿಯಾಯಿತು. ಗಿನ್ನಿಸ್ ಪ್ರವೇಶ ಅಷ್ಟು ಸುಲಭವಾಗಿರಲಿಲ್ಲ, ಎಲ್ಲಾ ತಾಂತ್ರಿಕ ಅಡಚಣೆಗಳನ್ನು ಎದುರಿಸಿ ಕೊನೆಗೂ ಗುರಿ ಸಾಧಿಸಿದೆವು ಎಂದರು.
ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬ ವಿಭಿನ್ನವಾಗಿರಬೇಕೆಂದು ಚಿಂತನೆ ನಡೆಸಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಾಕಿ ಕಾರ್ನಿವಲ್ ನ ಹೊಸ ರೂಪ ನೀಡಿದೆವು.
ಯುವ ಪೀಳಿಗೆಗೆ ಶ್ರೀಮಂತ ಕೊಡವ ಜಾನಪದ ಸಂಸ್ಕೃತಿಯನ್ನು ಪರಿಚಯಿಸಿ ತರಬೇತುಗೊಳಿಸುವ ಪ್ರಯತ್ನವಾಗಿ ಸಾಂಪ್ರದಾಯಿಕ ಬಾಳೋಪಾಟ್ ಪಡಿಪು ಕಾರ್ಯಾಗಾರವನ್ನು ಪ್ರತಿದಿನ ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಪಾಲ್ಗೊಂಡು ನುರಿತ ಜಾನಪದ ಕಲಾವಿದರಿಂದ ತರಬೇತಿ ಪಡೆದರು.
ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರದ ಮೂಲಕ ವೈವಿಧ್ಯಮಯ ವೃತ್ತಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಇರುವ ಅವಕಾಶಗಳನ್ನು ಪರಿಚಯಿಸಲಾಯಿತು. ಸುಮಾರು 132 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ಇದರ ಲಾಭ ಪಡೆದುಕೊಂಡಿರುವುದು ಹೆಮ್ಮೆ ಎನಿಸಿದೆ.
ವಿವಿಧ ಕ್ಷೇತ್ರದ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. 4 ಆಸ್ಪತ್ರೆಗಳ 14 ವೈದ್ಯರಿಂದ ಉಚಿತ ರಕ್ತ ಪರೀಕ್ಷೆ, ಇಸಿಜಿ, ಎಕ್ಸ್ರೇ ಮತ್ತು ಇತರ ಸೌಲಭ್ಯಗಳನ್ನು ಸುಮಾರು 200 ರೋಗಿಗಳು ಪಡೆದುಕೊಂಡರು.
ವಧುವರರ ಸಮಾವೇಶದ “ತಂದ್‌ಕಾರಡ ಬಿಡಾರ”ದಲ್ಲಿ 76 ಆಕಾಂಕ್ಷಿಗಳು ನೋಂದಾಯಿಸಿಕೊಂಡಿರುವುದು ವಿಶೇಷ. ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬದಲ್ಲಿ ಇದೇ ಮೊದಲ ಬಾರಿಗೆ ರಿಲೇ ಓಟದ ಸ್ಪರ್ಧೆಯನ್ನು ನಡೆಸಲಾಯಿತು. ಸುಮಾರು 54 ತಂಡಗಳು ಪಾಲ್ಗೊಂಡಿದ್ದವು.
ಫೀಲ್ಡ್ ಅಂಪೈರಿಂಗ್ ಕುರಿತು ಯುವಕರನ್ನು ಪ್ರೋತ್ಸಾಹಿಸಲು ಮೊದಲ ಬಾರಿಗೆ “ಎಂಪೈರ್ಸ್ ಕ್ಲಿನಿಕ್” ನ್ನು ಆಯೋಜಿಸಲಾಗಿತ್ತು. ಆಸಕ್ತ 36 ಶಿಬಿರಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು.
ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ದೊಡ್ಡ ಮೀಸೆ ಪ್ರದರ್ಶನದ “ಕೊಂಬ ಮೀಸೆರ ಬಂಬ” ಮತ್ತು ಉದ್ದನೆಯ ಕೂದಲಿನ “ಬೋಜಿ ಜಡೆರ ಬೋಜಕ್ಕ” ಸ್ಪರ್ಧೆ ಅತ್ಯಂತ ಯಶಸ್ವಿ ಎನಿಸಿಕೊಂಡಿತು. ಬಗೆಬಗೆಯ ಖಾದ್ಯಗಳ ಬಗ್ಗೆ ಅರಿವು ಮೂಡಿಸುವ ಆಹಾರ ಮೇಳ “ಫುಡ್ ಫೆಸ್ಟ್” ಯಶಸ್ವಿಯಾಗಿ ನಡೆಯಿತು.
ಜನರಲ್ ತಿಮ್ಮಯ್ಯ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಅವಕಾಶ ದೊರೆತದ್ದು ಹೆಮ್ಮೆ ಎನಿಸಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ 32 ಕೊಡವ ಹಾಕಿ ಸಾಧಕರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕುಂಡ್ಯೋಳಂಡ ಹಾಕಿ ಕಾರ್ನಿವಾಲ್ ನ್ನು ವಿಶ್ವವಿಖ್ಯಾತಿಯೆಡೆಗೆ ಕೊಂಡೊಯ್ದಿದೆ ಎಂದು ದಿನೇಶ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದರು.
30 ದಿನಗಳ ಕಾಲವೂ ನಾಪೋಕ್ಲುವಿನ ಜ. ತಿಮ್ಮಯ್ಯ ಕ್ರೀಡಾ ಮೈದಾನದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಸ್ಮರಣಾರ್ಥ ಪುತ್ಥಳಿ ಸ್ಥಾಪನೆ, ಕಳೆದ 23 ವರ್ಷಗಳ ಕೊಡವ ಕೌಟುಂಬಿಕ ಹಾಕಿ ಉತ್ಸವದ ವೈಭವವನ್ನು ಮೆಲುಕು ಹಾಕುವ ಮೊದಗೂಡ್(ಮ್ಯೂಸಿಯಂ) ಐನ್‌ಮನೆಯನ್ನು ಹೋಲುವ ಮುಖ್ಯ ವೇದಿಕೆ, ಬೃಹದಾಕಾರದ ಸುಸಜ್ಜಿತ ಗ್ಯಾಲರಿ, ಸುವ್ಯವಸ್ಥಿತ 3 ಮೈದಾನಗಳು, ಸುತ್ತಲೂ ವಿವಿಧ ಕಂಪೆನಿಗಳ ಮಾರಾಟ ಮಳಿಗೆಗಳು, ಸ್ಥಳೀಯ ಉದ್ಯಮಿಗಳನ್ನು ಉತ್ತೇಜಿಸುವ ವ್ಯಾಪಾರ ಮಳಿಗೆಗಳು ಎಲ್ಲವೂ ಆಕರ್ಷಣೀಯವಾಗಿತ್ತು.
ಪ್ರತಿದಿನ ಪಂದ್ಯಾವಳಿಯಿಂದ ಹೊರಬೀಳುತ್ತಿದ್ದ ಕುಟುಂಬಗಳಿಗೆ ಕೃತಜ್ಞತಾಪೂರ್ವವಾಗಿ ಕೊಡವ ಸಾಂಪ್ರದಾಯಿಕ ಗೆಜ್ಜೆತಂಡ್ ನೀಡಿ ಗೌರವಪೂರ್ವಕವಾಗಿ ಅಭಿನಂಧಿಸಲಾಗುತ್ತಿತ್ತು. ಇದೆಲ್ಲವೂ “ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024” ನ್ನು ವಿಶಿಷ್ಠ, ವಿಭಿನ್ನ ಮತ್ತು ವಿಶ್ವ ವಿಖ್ಯಾತಗೊಳಿಸಲು ಸಹಕಾರಿಯಾಯಿತು ಎಂದು ದಿನೇಶ್ ಕಾರ್ಯಪ್ಪ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಕುಂಡ್ಯೋಳಂಡ ವಿಶು ಪೂವಯ್ಯ, ಪ್ರಮುಖರಾದ ಕುಂಡ್ಯೋಳಂಡ ಗಣೇಶ್ ಮುತ್ತಪ್ಪ, ಬಿಪಿನ್ ಬೆಳ್ಯಪ್ಪ ಹಾಗೂ ಕುಂಡ್ಯೋಳಂಡ ಕಾಶಿ ತಮ್ಮಯ್ಯ ಉಪಸ್ಥಿತರಿದ್ದರು.










