ಮಡಿಕೇರಿ ಮೇ 7 NEWS DESK : ಬದುಕನ್ನು ಪ್ರತೀ ವ್ಯಕ್ತಿಯೂ ಮನಸ್ಸಾರೆ ಆನಂದಿಸಬೇಕು, ಆಗ ಅವರ ನಡುವಳಿಕೆಯಲ್ಲಿ ಶ್ರೇಷ್ಠತೆ, ಮನತೃಪ್ತಿ ಕಾಣಲು ಸಾಧ್ಯವಾಗುತ್ತದೆ ಎಂದು ಮ್ಯಾನೇಜ್ ಮೆಂಟ್ ಸಲಹೆಗಾರ ಮೈಸೂರಿನ ಕೊಡಂದೆರ ಹರೀಶ್ ಮಾಚಯ್ಯ ಹೇಳಿದ್ದಾರೆ.
ನಗರದ ಕೊಡಗು ವಿದ್ಯಾಲಯದಲ್ಲಿ 20 ದಿನಗಳಿಂದ ಆಯೋಜಿಸಲಾಗಿದ್ದ ಸಮಾಗಮ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಲಾಕೃತಿಗಳ ಪ್ರದಶ೯ನ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಕೊಡಂದೆರ ಹರೀಶ್ ಮಾಚಯ್ಯ, ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯು ಚಾಂಪಿಯನ್ ಆಗಿ ಹೊರಹೊಮ್ಮುತ್ತಾನೆಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬ ವ್ಯಕ್ತಿ ಜೀವನವನ್ನು ಆನಂದಿಸಬೇಕು, ಹಾಗೇ ಅವರ ನಡವಳಿಕೆಯಲ್ಲಿ ಶ್ರೇಷ್ಠತೆಯನ್ನು ಹೊಂದಿರಬೇಕು, ಇಂದು ಎಲ್ಲಿದ್ದೀರಿ ಹಾಗೂ ಮುಂದೆ ಭವಿಷ್ಯದಲ್ಲಿ ನೀವು ಎಲ್ಲಿರುವಿರಿ ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ಮಕ್ಕಳಿಗೆ ಹರೀಶ್ ಮಾಚಯ್ಯ ಕಿವಿಮಾತು ಹೇಳಿದರು.
ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರ ಮಾತನಾಡಿ, ಈ ಬಾರಿಯ ಮಾಗಮ ಬೇಸಿಗೆ ಶಿಬಿರ ಯಶಸ್ವಿಯಾಗಲು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಕೊಡುಗೆ ಅಪಾರವಾಗಿದೆ ಎಂದರಲ್ಲದೇ, 260 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಸಕ್ತಿ ಹಾಗೂ ಲವಲವಿಕೆಯಿಂದ ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಮುಂದೆಯೂ ವಿದ್ಯಾಥಿ೯ಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಇಂತಹ ಹಲವು ಶಿಬಿರಗಳನ್ನು ಆಯೋಜನೆ ಮಾಡಿ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯ ಶಾಲೆಯ ಕ್ರೀಡಾ ಸಮಿತಿ ಅಧ್ಯಕ್ಷ ರಘು ಮಾದಪ್ಪ, ಮಡಿಕೇರಿ ಕೊಡವ ಸಮಾಜದ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ಆಡಳಿತ ಮಂಡಳಿ ಸದಸ್ಯ ಸಿ.ಎಸ್.ಗುರುದತ್ತ್ , ಆಡಳಿತ ನಿರ್ವಹಣಾಧಿಕಾರಿ ಪಿ.ರವಿ ಸೇರಿದಂತೆ ಶಾಲಾ ಸಿಬ್ಬಂದಿಗಳು, ಪೋಷಕರು, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ತರಬೇತುದಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು.
ಕಳೆದ 20 ದಿನಗಳಿಂದ ನಡೆಸಿದ ಶಿಬಿರದ ಲ್ಲಿ ಪಾಲ್ಗೊಂಡಿದ್ದ 250 ಮಕ್ಕಳು ತಾವು ಕಲಿತ ವಿಭಿನ್ನ ಕಲೆಗಳನ್ನು ಪ್ರದರ್ಶಿಸು ವ ಮೂಲಕ ಗಮನ ಸೆಳೆ ದರು.
ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಯಾರಿಸಿದ್ದ ವಿವಿಧ ರೀತಿಯ ಕಲಾಕೃತಿಗಳ ಪ್ರದರ್ಶನ ಕೂಡ ನಡೆಯಿತು.