ಮಡಿಕೇರಿ ಮೇ 11 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಮಾರಿಯಮ್ಮ ಬೇವಿನ ಸೊಪ್ಪಿನ ಕರಗೋತ್ಸವ ಮೇ 12 ರಂದು ಆರಂಭವಾಗಲಿದೆ.
ಅನಾದಿ ಕಾಲದಿಂದಲೂ ಶಕ್ತಿ ದೇವಿಯ ಬೇವಿನ ಸೊಪ್ಪಿನ ಕರಗೋತ್ಸವ ನಡೆಸಿಕೊಂಡು ಬರುತ್ತಿದ್ದು, ಭೀಕರ ಸಾಂಕ್ರಾಮಿಕ ರೋಗಗಳು ನಾಡಿಗೆ ಬರಬಾರದೆಂಬ ನಂಬಿಕೆಯಿಂದ ನಾಡಿನ ಸುಭಿಕ್ಷೆಗಾಗಿ ಈ ಕರಗೋತ್ಸವವನ್ನು ಆಚರಿಸಲಾಗುತ್ತಿದೆ.
ಮೇ 12 ರಂದು ಮಧ್ಯಾಹ್ನ 2 ಗಂಟೆಗೆ ದೇವಿಯ ಕರಗಗಳ ಶೃಂಗಾರಕ್ಕೆ ದೇವಾಲಯದಿಂದ ಪಂಪಿನ ಕೆರೆಗೆ ತೆರಳಲ್ಲಿದ್ದು, ಸಂಜೆ 6.30ಕ್ಕೆ ಪಂಪಿನ ಕೆರೆಯಲ್ಲಿ ಕರಗಗಳಿಗೆ ವಿಶೇಷ ಪೂಜೆಯ ನಂತರ ವಾದ್ಯಗೋಷ್ಠಿಯೊಂದಿಗೆ ದೇವಿಯ ಕರಗಗಳ ಮೆರವಣಿಗೆ ಆರಂಭವಾಗಲಿದೆ.
ಮೇ 13 ರಂದು ದೇವಾಲಯದಲ್ಲಿ ಕರಗಗಳಿಗೆ ವಿಶೇಷ ಪೂಜೆ, ಮೇ 14 ರಂದು ರಾತ್ರಿ 10 ಗಂಟೆಗೆ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಮಾರಿಯಮ್ಮ ಸನ್ನಿಧಿಯಲ್ಲಿ ಸಾಂಪ್ರದಾಯಿಕ ದೇವಿಯ ಪೂಜೆಗಳು ಜರುಗಲಿದ್ದು, ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.
ಮೇ 15 ರಂದು ಸಂಜೆ 7 ಗಂಟೆಗೆ ದೇವಿಯ ಕರಗಗಳಿಗೆ ದೀಪಗಳ ಆರಾಧನೆಯೊಂದಿಗೆ ಸಾಂಪ್ರದಾಯಿಕ ಕರಗಗಳ ವಿಸರ್ಜನೋತ್ಸವ ಜರುಗಲಿದೆ.
ದೇವಾಲಯದಲ್ಲಿ 4 ದಿನಗಳ ಕಾಲ ನಡೆಯಲಿರುವ ಶ್ರೀ ಮಾರಿಯಮ್ಮ ಕರಗೋತ್ಸವಕ್ಕೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದೆ.