ಮಡಿಕೇರಿ ಮೇ 17 NEWS DESK : ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ (ಬೇಡು ಹಬ್ಬ) ಮೇ 18 ಹಾಗೂ 19ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬ ಸಂಭ್ರಮದಿಂದ ನಡೆಯಲಿದ್ದು, ಮೇ 11ಕ್ಕೆ ದೇವ ಕಟ್ಟ್ ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳು ಆಚರಣೆಯಲ್ಲಿದೆ.
ಮೇ 18 ರಂದು ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಎಂಬ ವಿಶೇಷ ಆಚರಣೆ ನಡೆಯಲಿದೆ. ಇಲ್ಲಿ ಕೊಡವ ಜನಾಂಗದವರೇ ಪೂಜಾರಿಗಳಾಗಿದ್ದಾರೆ (ಚಮ್ಮಟೀರ ಹಾಗೂ ಮೂಕಳೇರ). ಮಧ್ಯಾಹ್ನದ ನಂತರ ಊರುತಕ್ಕರಾದ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ಪೊಲವಪ್ಪ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಲಿದೆ.
ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ಹೊರಟ ಪೊಲವಪ್ಪ ತೆರೆ ಮಚ್ಚಿಯಂಡ ಬಲ್ಯಮನೆ ಸಮೀಪದ ಅಂಬಲಕ್ಕೆ ತೆರಳಿ ವಿವಿಧ ಪೂಜಾ ವಿಧಿವಿಧಾನಗಳು ಹಾಗೂ ಆಚರಣೆಯೊಂದಿಗೆ ಊರಿನ ವಿವಿಧ ನಿಗದಿತ ಸ್ಥಳಗಳಿಗೆ ತೆರಳಿ ಅಪರಾಹ್ನ 3ಗಂಟೆ ಪೊಲವಪ್ಪ ದೇವಸ್ಥಾನಕ್ಕೆ (ಜೋಡುಬೀಟಿಯಿಂದ ಮೂಕಳೇರ ಬಲ್ಯಮನೆಗೆ ಹೋಗುವ ರಸ್ತೆಯಲ್ಲಿರುವ ದೇವಸ್ಥಾನ) ತೆರಳಿ ಅಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಲಿಸಲಾಗುವುದು.
ಮುಂಜಾನೆಯಿಂದಲೇ ವಿವಿಧ ಕಟ್ಟುಪಾಡುಗಳನ್ನು ಆಚರಿಸುವ ಮೂಲಕ ಉಪವಾಸ ವೃತ್ತದಲ್ಲಿರುವ ಇಬ್ಬರು ಕೊಡವ ಪೂಜಾರಿಗಳು ಪೊಲವಪ್ಪ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಆಚರಣೆಯನ್ನು ಮಾಡುತ್ತಾರೆ. ಮಾತ್ರವಲ್ಲ ಇಲ್ಲಿಗೆ ಮಣ್ಣಿನ ಬೋಟೆಕಾರ (ಮಣ್ಣಿನಿಂದ ಮಾಡಲಾದ ನಾಯಿ) ಅರ್ಪಿಸಲಾಗುವುದು. ನಂತರ ವಿವಿಧ ಆಚರಣೆಯ ಬಳಿಕ ಭಕ್ತರು ಹರಕೆ ಕಾಣಿಕೆ ಸಲ್ಲಿಸುತ್ತಾರೆ. ಇಲ್ಲಿಗೆ ಮಾತ್ರ ಮಹಿಳೆಯರು ಬರಬಹುದಾಗಿದ್ದು ನಂತರ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ಆಚರಣೆಗೆ ಮಹಿಳೆಯ ಆಗಮನ ನಿಧಿಷಲಾಗಿದೆ.
ಸಂಜೆ 5ಗಂಟೆಯ ನಂತರ ಪೊನ್ನಂಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಅವುಲ್ ಕಾರ್ಯಕ್ರಮ ನಡೆಯಲಿದೆ. ನಂತರ ಹರಕೆ ಒಪ್ಪಿಸಲಾಗುವುದು. ವಿವಿಧ ಆಚರಣೆಯ ಬಳಿಕ ಅಲ್ಲಿಂದ ತೆರಳಿ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ರಾತ್ರಿ ಹನ್ನೆರಡು ಗಂಟೆಯೊಳಗೆ ಮನೆಕಳಿ ಹೊರಡಲಿದೆ.
19 ರಂದು ಮುಂಜಾನೆ ಮಚ್ಚಿಯಂಡ ಕುಟುಂಬದ ಅಂಬಲದಲ್ಲಿ ಮನೆ ಕಳಿ ಮುಗಿಯಲಿದೆ. ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ತಲಾ ಒಂದೊಂದು ಕುದುರೆ ಹಾಗೂ ದೇವರ ಮೊಗ ಹೊರಡಲಿದ್ದು, 3ಗಂಟೆಯ ನಂತರ ಹಳ್ಳಿಗಟ್ಟುವಿನಲ್ಲಿರುವ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಎರಡು ಕುದುರೆ ಹಾಗೂ ದೇವರ ಮೊಗ ಮುಖಾಮುಖಿಯಾಗಿ ಸಂಭ್ರಮಿಸಿ ವಿವಿಧ ರೀತಿಯ ಆಚರಣೆಯ ಬಳಿಕ ಹತ್ತಿರದಲ್ಲಿರುವ ದೇವರ ಕೆರೆಯಿಂದ ಕೆಸರನ್ನು ತಂದು ಊರಿನವರು ಪರಸ್ಪರ ಕೆಸರು ಎರಚಾಟದೊಂದಿಗೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ ಇಲ್ಲಿ ಹೊರಗಿನ ಊರಿನವರಿಗೆ ಅತಿಥಿಗಳಿಗೆ, ನೆಂಟರಿಗೆ ಕೆಸರು ಎರಚುವಂತಿಲ್ಲ. ಕೆಸರು ಎರಚಾಟದ ನಂತರ ಹತ್ತಿರದ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಹರಕೆ ಕಾಣಿಕೆಗಳನ್ನು ಸಲ್ಲಿಸಲಾಗುವುದೆಂದು ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾಹಿತಿ ನೀಡಿದರು.
ಅವುಲ್ ಎಂದರೆ ಏನು.?
ಗುಂಡಿಯತ್ ಅಯ್ಯಪ್ಪ ದೇವರಿಗೆ ಅವುಲ್ ಎಂಬುದು ವಿಶೇಷವಾಗಿದ್ದು, ಬೆಳಿಗ್ಗೆಯಿಂದ ವಿವಿಧ ವ್ರತಗಳನ್ನು ಪಾಲಿಸುತ್ತಾ ಉಪವಾಸದಲ್ಲಿರುವ ಇಬ್ಬರು ಕೊಡವ ಪೂಜಾರಿಗಳು ಊರಿನ ನಿಗದಿತ ಸ್ಥಳದಲ್ಲಿನ ದೇವರ ಕೆರೆಯಲ್ಲಿ ಸ್ನಾನಮಾಡಿ ಅಲ್ಲಿಯೇ ಬೆಂಕಿಯನ್ನು ಹಾಕಿ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಮಾಡಿ ನಂತರ ಅದನ್ನು ಮತ್ತೊಂದು ಮಣ್ಣಿನ ಪಾತ್ರೆಯಲ್ಲಿ ಹುರಿದು ಅಲ್ಲಿಯೇ ಬಂಡೆ ಕಲ್ಲಿನಲ್ಲಿ ನಿರ್ಮಿಸಲಾಗಿರುವ ಕಲ್ಲಿನಲ್ಲಿ ಒನಕೆಯಿಂದ ಕುಟ್ಟಿ ಅವಲಕ್ಕಿ ಮಾಡುತ್ತಾರೆ. ಇದಕ್ಕೆ ಒಂದಷ್ಟು ಬೆಲ್ಲ ಹಾಗೂ ಬಾಳೆಹಣ್ಣು ಸೇರಿಸಿ ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ ತಂದು ಇದನ್ನೆ ಪ್ರಸಾದ ರೂಪದಲ್ಲಿ ಜನರಿಗೆ ನೀಡುತ್ತಾರೆ ಹಾಗೂ ದೇವರಿಗೆ ನೈವೇದ್ಯ ರೂಪದಲ್ಲಿ ಆರ್ಪಿಸುತ್ತಾರೆ. ನಂತರ ಇಲ್ಲಿ ಭಕ್ತರಿಂದ ಹರಕೆಯ ರೂಪದಲ್ಲಿ ಸಾವಿರಾರು ತೆಂಗಿನಕಾಯಿಯನ್ನು ಈಡುಕಾಯಿ ರೂಪದಲ್ಲಿ ಒಡೆಯುತ್ತಾರೆ. ವಿವಿಧ ಆಚರಣೆಯ ಬಳಿಕ ಅಲ್ಲಿಂದ ತೆರಳಿ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ರಾತ್ರಿ ಹನ್ನೆರಡು ಗಂಟೆಯೊಳಗೆ ಮನೆಕಳಿ ಹೊರಡಲಿದೆ. ಈ ಹಿಂದೆ ಊರಿನ ಎಲ್ಲಾ ಮನೆಗಳಿಗೆ ರಾತ್ರಿ ಮನೆ ಮನೆಕಳಿ ಹೋಗುತ್ತಿತ್ತು ಕಾರಣಾಂತರಗಳಿಂದ ಒಂದಷ್ಟು ವರ್ಷದಿಂದ ಮನೆಕಳಿ ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಗಳಿಗೆ ತೆರಳಿ, 19ರಂದು ಮುಂಜಾನೆ ಮಚ್ಚಿಯಂಡ ಕುಟುಂಬದ ಅಂಬಲದಲ್ಲಿ ಮನೆ ಕಳಿ ಮುಗಿಯಲಿದೆ.