ಮಡಿಕೇರಿ ಮೇ 19 NEWS DESK : ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಕಳೆದ 1 ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ನೆಲ್ಯಹುದಿಕೇರಿ, ತೆಪ್ಪದಕಂಡಿ, ಕೊಪ್ಪ ಸೇತುವೆಯ ಕೆಳಭಾಗ ಹಾಗೂ ಕೂಡಿಗೆ ಬಳಿ ಹರಿಯುವ ಕಾವೇರಿ ನದಿಯ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದ್ದು, ನದಿ ಬರಡಾಗಿ ದಡ ಸೇರಿದ್ದ ರ‍್ಯಾಫ್ಟ್ ಗಳು ದುಬಾರೆಯಲ್ಲಿ ಮತ್ತೆ ನೀರಿಗಿಳಿದಿವೆ. ಮಳೆಯಾಗಿ ತಂಪಿನ ಹವಾಮಾನ ಕಂಡು ಬಂದಿರುವ ಕಾರಣ ದುಬಾರೆಗೆ ಅತೀ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದುಬಾರೆಯಲ್ಲಿ ಮತ್ತೆ ರಿವರ್ ರ‍್ಯಾಫ್ಟಿಂಗ್ ಕ್ರೀಡೆಗೆ ಚಾಲನೆ ನೀಡಲಾಗಿದೆ. ಬಿರುಬಿಸಿಲಿನಿಂದ ಕಾವೇರಿ ನದಿ ಬತ್ತಿಹೋದ ಪರಿಣಾಮ ಕಳೆದ ಒಂದೂವರೆ ತಿಂಗಳಿನಿಂದ ದುಬಾರೆ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಪ್ರವಾಸೋದ್ಯಮ ನಂಬಿ ಬದುಕು ಕಟ್ಟಿಕೊಂಡಿದ್ದ ರಿವರ್ ರ‍್ಯಾಫ್ಟ್ ಉದ್ಯಮಿಗಳಿಗೆ ಪ್ರಸ್ತುತ ಮಳೆಯ ವಾತಾವರಣ ಸಮಾಧಾನ ತರಿಸಿದೆ. ದುಬಾರೆ ರಿವರ್ ರ‍್ಯಾಫ್ಟಿಂಗ್ ಅನ್ನು ನಂಬಿಕೊಂಡು ಸುಮಾರು 41 ಮಂದಿ ರಿವರ್ ರ‍್ಯಾಫ್ಟಿಂಗ್ ಮಾಲೀಕರು, 80 ಮಂದಿ ಆಪರೇಟರ್ಸ್ ಹಾಗೂ ವಿವಿಧ ಬಗೆಯ ತಿನಿಸುಗಳು, ಹಣ್ಣು ಹಂಪಲು, ತಂಪು ಪಾನೀಯ ಅಂಗಡಿಗಳನ್ನಿಟ್ಟುಕೊಂಡು ಸುಮಾರು 50ರಿಂದ 60 ಮಂದಿ ಜೀವನ ಸಾಗಿಸುತ್ತಿದ್ದಾರೆ. ಪ್ರವಾಸಿಗರನ್ನು ಅವಲಂಬಿಸಿ ದುಬಾರೆಯಲ್ಲಿ ವ್ಯಾಪಾರ ವಹಿವಾಟಿನಲ್ಲೂ ಹಲವು ಮಂದಿ ತೊಡಗಿಸಿಕೊಂಡಿದ್ದು, ಇದೀಗ ಪ್ರವಾಸಿಗರ ಆಗಮನದಿಂದ ವ್ಯಾಪಾರೋದ್ಯಮದಲ್ಲೂ ಚೇತರಿಕೆ ಕಂಡು ಬಂದಿದೆ. ಬೇಸಿಗೆ ರಜೆ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿಗರು ದುಬಾರೆಯತ್ತ ಆಗಮಿಸುತ್ತಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿರುವ ಕಾರಣ ಸ್ಟಿಲ್ ವಾಟರ್ ಜಲಕ್ರೀಡೆ ಆರಂಭಿಸಲಾಗಿದೆ. ಇರುವ ನೀರಿನಲ್ಲಿ ರ‍್ಯಾಫ್ಟ್ ಬೋಟ್‌ಗಳಲ್ಲಿ ಪ್ರವಾಸಿಗರನ್ನು ನದಿಯಲ್ಲಿ ಸುತ್ತಾಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕಾವೇರಿ ನದಿ ಬೋರ್ಗರೆಯುತ್ತಾ ಹರಿದಲ್ಲಿ ವೈಟ್ ವಾಟರ್ ಸಾಹಸಿ ಕ್ರೀಡೆ ಆರಂಭಿಸಲಾಗುವುದು ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯ್ತಿ ಅಧ್ಯಕ್ಷರೂ ಆದ ರಿವರ್ ರ‍್ಯಾಫ್ಟಿಂಗ್ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಮಾಹಿತಿ ನೀಡಿದ್ದಾರೆ. ದುಬಾರೆಯಲ್ಲಿ ಸುಮಾರು 70ರಿಂದ 80ರಷ್ಟು ರ‍್ಯಾಫ್ಟ್ ಬೋಟ್‌ಗಳಿದ್ದು, ಇದನ್ನೇ ನಂಬಿರುವ ಬೋಟ್ ಮಾಲೀಕರು, ಕಾರ್ಮಿಕರಿಗೆ ಮಳೆಯಿಲ್ಲದೆ ತೀವ್ರ ಸಮಸ್ಯೆ ಎದುರಾಗಿತ್ತು. ಇದೀಗ ನದಿಯಲ್ಲಿ ಒಂದೂವರೆ ಕಿಲೋ ಮೀಟರ್‌ನಲ್ಲಿ ಸ್ಟಿಲ್ ವಾಟರ್ ಕ್ರೀಡೆ ನಡೆಸಲಾಗುತ್ತಿದೆ. ಉತ್ತಮ ಮಳೆಯಾದಲ್ಲಿ ಜೂನ್ ಜುಲೈ ತಿಂಗಳಲ್ಲಿ ವೈಟ್ ವಾಟರ್ ಸಾಹಸಿ ಕ್ರೀಡೆ ನಡೆಯಲಿದೆ ಎಂದು ವಿಶ್ವ ತಿಳಿಸಿದ್ದಾರೆ.










